ಫೇಸ್‌ಬುಕ್‌ನಲ್ಲಿ ಪರಿಚಿತಳಾದ ಯುವತಿ ಮೇಲೆ ಅತ್ಯಾ*ರ ಎಸಗಿ ಬಳಿಕ ವಿಡಿಯೋ ಮಾಡಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಗನ ಬಂಧನವಾಗಿದ್ದು, ಬ್ಲ್ಯಾಕ್‌ಮೇಲ್ ಮಾಡಿದ ತಂದೆ ನಾಪತ್ತೆಯಾಗಿದ್ದಾನೆ.

ಬೆಂಗಳೂರು : ಫೇಸ್‌ಬುಕ್‌ನಲ್ಲಿ ಪರಿಚಿತಳಾದ ಯುವತಿ ಮೇಲೆ ಅತ್ಯಾ*ರ ಎಸಗಿ ಬಳಿಕ ವಿಡಿಯೋ ಮಾಡಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಗನ ಬಂಧನವಾಗಿದ್ದು, ಬ್ಲ್ಯಾಕ್‌ಮೇಲ್ ಮಾಡಿದ ತಂದೆ ನಾಪತ್ತೆಯಾಗಿದ್ದಾನೆ.

ಬಸವೇಶ್ವರ ನಗರದ ನಿವಾಸಿ ನಿರಂಜನ್ ಬಂಧಿತನಾಗಿದ್ದು, ತಪ್ಪಿಸಿಕೊಂಡಿರುವ ಆತನ ತಂದೆ ರಾಜಶೇಖರ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆ ತಂದೆ-ಮಗನ ವಿರುದ್ಧ 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂದೆ-ಮಗನ ಕಾಟ:

ರಿಯಲ್‌ ಎಸ್ಟೇಟ್ ವ್ಯವಹಾರ ನಡೆಸುವ ರಾಜಶೇಖರ್‌, ತಮ್ಮ ಕುಟುಂಬದ ಜತೆ ಬಸವೇಶ್ವರನಗರದಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಂತ್ರಸ್ತೆಗೆ ನಿರಂಜನ್ ಪರಿಚಯವಾಗಿದೆ. ಆಗ ಚಾಟಿಂಗ್ ನಡೆದು ಕೊನೆಗೆ ಪರಸ್ಪರ ಮೊಬೈಲ್ ಸಂಖ್ಯೆಗಳ ವಿನಿಮಯವಾಗಿದ್ದವು. ಈ ಸ್ನೇಹದಲ್ಲಿ ಫೇಸ್‌ಬುಕ್ ಗೆಳತಿ ಜತೆ ನಿರಂಜನ್ ಏಕಾಂತವಾಗಿ ಕಳೆದಿದ್ದ. ಆ ಖಾಸಗಿ ಕ್ಷಣಗಳ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಆತ, ಈ ವಿಡಿಯೋ ಮುಂದಿಟ್ಟು ಗೆಳತಿಗೆ ಬ್ಲ್ಯಾಕ್ ಮೇಲ್ ಮಾಡಿ ಏಪ್ರಿಲ್‌ನಿಂದ ಆಗಸ್ಟ್ 20ರ ಅವಧಿಯಲ್ಲಿ ಎರಡ್ಮೂರು ಬಾರಿ ಅತ್ಯಾ*ರ ಎಸಗಿದ್ದಾನೆ. ಅಲ್ಲದೆ ಸಂತ್ರಸ್ತೆಯ ಮೇಲೆ ವಿಚಕ್ಷಣೆ ನಡೆಸಿದ್ದ ಆತ, ಆಕೆಯ ಸ್ಕೂಟರ್‌ಗೆ ಜಿಪಿಎಸ್‌ ಅಳವಡಿಸಿ ನೆರಳಿನಂತೆ ಕಣ್ಗಾವಲಿಟ್ಟಿದ್ದ ಎನ್ನಲಾಗಿದೆ.

ಈ ಕಾಟದಿಂದ ಬೇಸತ್ತ ಆಕೆ, ಕೊನೆಗೆ ಬಸವೇಶ್ವರನಗರ ಠಾಣೆಗೆ ಪೊಲೀಸರಿಗೆ ದೂರು ಕೊಟ್ಟಿದ್ದಳು. ಆಗ ತಾನು ಮತ್ತೆ ಆಕೆಯ ತಂಟೆಗೆ ಹೋಗುವುದಿಲ್ಲ ಎಂದು ಕ್ಷಮೆ ಕೋರಿ ಮುಚ್ಚಳಿಕೆ ಪತ್ರವನ್ನು ನಿರಂಜನ್‌ ಬರೆದುಕೊಟ್ಟಿದ್ದ. ಇದಾದ ಕೆಲ ದಿನಗಳ ಬಳಿಕ ಮತ್ತೆ ಸಂತ್ರಸ್ತೆಗೆ ಲೈಂಗಿಕ ಕ್ರಿಯೆಗೆ ನಿರಂಜನ್ ಕಾಟ ಶುರುವಾಯಿತು ಎಂದು ತಿಳಿದು ಬಂದಿದೆ.

ಇದೇ ವೇಳೆ ತನ್ನ ಪುತ್ರನ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದ ರಾಜಶೇಖರ್‌, ಸಂತ್ರಸ್ತೆಗೆ ಕರೆ ಮಾಡಿ ನಿನ್ನ ಅಶ್ಲೀಲ ವಿಡಿಯೊ ಮತ್ತು ಫೋಟೊಗಳು ತನ್ನ ಬಳಿಯಿವೆ. ತನ್ನ ಜತೆ ದೈಹಿಕ ಸಂಬಂಧ ಹೊಂದಬೇಕು. ಹಾಗೆಯೇ ತಾನು ಸೂಚಿಸಿದವರೊಂದಿಗೂ ಸಹ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಬೆದರಿಕೆ ಹಾಕಿದ್ದ. ಈ ತಂದೆ-ಮಗನ ಲೈಂಗಿಕ ದೌರ್ಜನ್ಯದಿಂದ ಬೇಸತ್ತು ಕೊನೆಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರಿಗೆ ಆಕೆ ದೂರು ಕೊಟ್ಟಿದ್ದಾಳೆ. ತಕ್ಷಣವೇ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಿರಂಜನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾದ ಸಂಗತಿ ತಿಳಿದು ಆತನ ತಂದೆ ರಾಜಶೇಖರ್ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.