ಸಾರಾಂಶ
ಮೈಮೇಲೆ ಪ್ರೇತ ಬರುತ್ತೆ ಎಂದು ಎಣಿಸಿ ಮಹಿಳೆಯೊಬ್ಬಳನ್ನು ಕತ್ತಲ ಕೋಣೆಯಲ್ಲಿ ಕೂಡಿಹಾಕಿ ದಿಗ್ಬಂಧನ ಮಾಡಿದ್ದ ಅಮಾನವೀಯ ಪ್ರಕರಣದಲ್ಲಿ ಅನಾಮಧೇಯ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಆಕೆಯನ್ನು ಬಂಧಮುಕ್ತಗೊಳಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕನ್ನಡಪ್ರಭವಾರ್ತೆ ಪುತ್ತೂರು ಮೈಮೇಲೆ ಪ್ರೇತ ಬರುತ್ತೆ ಎಂಬ ಮೂಢನಂಬಿಕೆ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯೊಬ್ಬಳನ್ನು ಕತ್ತಲ ಕೋಣೆಯಲ್ಲಿ ಕೂಡಿಹಾಕಿ ದಿಗ್ಬಂಧನ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಇಡಬೆಟ್ಟು ಎಂಬಲ್ಲಿ ಬೆಳಕಿಗೆ ಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಪೊಲೀಸರ ಸಹಕಾರದೊಂದಿಗೆ ದಿಗ್ಭಂಧನ ಮುಕ್ತಗೊಳಿಸಿ, ಮಹಿಳೆಯನ್ನು ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಗ್ರಾಮದ ಶ್ರೀಪತಿ ಹೆಬ್ಬಾರ್ ಎಂಬುವರ ಪತ್ನಿ ಆಶಾಲತಾ ಎಂಬುವರನ್ನು ಮನೆಯ ಪಕ್ಕದ ಗೂಡಿನಂತಿರುವ, ಕತ್ತಲ ಕೋಣೆಯಲ್ಲಿ ಕಳೆದ 3 ತಿಂಗಳಿನಿಂದ ದಿಗ್ಬಂಧನದಲ್ಲಿರಿಸಲಾಗಿತ್ತು. ದಿನವೊಂದಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಚಹಾ ಮತ್ತು ಬಿಸ್ಕೆಟ್ ನೀಡಲಾಗುತ್ತಿತ್ತು. ಈ ಬಗ್ಗೆ ಬಂದ ಅನಾಮಧೇಯ ಕರೆ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದಾಗ ನಿರಾಕರಿಸಿದರು. ಬಳಿಕ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ವೇಳೆ, ಶ್ರೀಪತಿ ಹೆಬ್ಬಾರ್ ಅವರು ಮನೆಯಲ್ಲಿ ಇರಲಿಲ್ಲ. ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ. ಶ್ರೀಪತಿಯವರ ಸಹೋದರಿ ಯನ್ನು ಅಧಿಕಾರಿಗಳು ವಿಚಾರಿಸಿದಾಗ, ಆಕೆಗೆ ಪ್ರೇತ ಮೈಮೇಲೆ ಬರುವ ಕಾರಣಕ್ಕಾಗಿ ದಿಗ್ಬಂಧನದಲ್ಲಿಸಿರುವುದಾಗಿ ತಿಳಿಸಿದರು.
ಅಡುಗೆ ವೃತ್ತಿ ಮಾಡುತ್ತಿದ್ದ ಶ್ರೀಪತಿ, ಬಂಟ್ವಾಳ ತಾಲೂಕಿನ ವಿಟ್ಲದ ವಿಶ್ವಕರ್ಮ ಸಮಾಜದ ಆಶಾಲತಾರನ್ನು ಮದುವೆಯಾಗಿದ್ದರು. ಇವರದು ಅಂತರ್ಜಾತಿ ವಿವಾಹವಾಗಿದ್ದು, 9 ವರ್ಷ ಪ್ರಾಯದ ಪುತ್ರಿ ಇದ್ದಾಳೆ.