ಮಿಕ್ಸರ್‌ ಲಾರಿಗೆ ಬೈಕ್‌ ಡಿಕ್ಕಿಯಾಗಿ ಬಿಎಂಟಿಸಿ ಗುತ್ತಿಗೆ ನೌಕರ ಸಾವು

| Published : Jul 01 2024, 01:48 AM IST / Updated: Jul 01 2024, 05:31 AM IST

ಮಿಕ್ಸರ್‌ ಲಾರಿಗೆ ಬೈಕ್‌ ಡಿಕ್ಕಿಯಾಗಿ ಬಿಎಂಟಿಸಿ ಗುತ್ತಿಗೆ ನೌಕರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಎಂಟಿಸಿ ನೌಕರ, ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ.

 ಬೆಂಗಳೂರು : ರಸ್ತೆ ಬದಿ ನಿಲುಗಡೆ ಮಾಡಿದ್ದ ಸಿಮೆಂಟ್‌ ಮಿಕ್ಸರ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಾಲಹಳ್ಳಿಯ ಮುತ್ಯಾಲನಗರ ನಿವಾಸಿ ಜನಾರ್ದನ್‌(26) ಮೃತ ಸವಾರ. ಹೆಬ್ಬಾಳದ ಭದ್ರಪ್ಪ ಬಡಾವಣೆ ಸಮೀಪದ ರಿಂಗ್‌ ರಸ್ತೆಯಲ್ಲಿ ಭಾನುವಾರ ಮುಂಜಾನೆ ಸುಮಾರು 2.10ಕ್ಕೆ ಈ ಘಟನೆ ನಡೆದಿದೆ.

ಮೃತ ಸವಾರ ಜನಾರ್ದನ್‌ ಬಿಎಂಟಿಸಿ ಗುತ್ತಿಗೆ ನೌಕರನಾಗಿದ್ದು, ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಭಾನುವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಯಲಹಂಕದಿಂದ ಮುತ್ಯಾಲನಗರಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ರಿಂಗ್‌ ರಸ್ತೆಯಲ್ಲಿ ಹೋಗುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಸಿಮಿಂಟ್‌ ಮಿಕ್ಸರ್‌ ವಾಹನಕ್ಕೆ ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಜನಾರ್ದನ್‌ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಹಾಗೂ ಇತರೆ ವಾಹನ ಸವಾರರು ಗಾಯಾಳು ಜನಾರ್ದನ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಜನಾರ್ದನ್‌ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.ಸಿಗ್ನಲ್‌ ಲೈಟ್‌ ಹಾಕದೆ ನಿಂತಿದ್ದ ಮಿಕ್ಸರ್‌ ಲಾರಿ

ಸಿಗ್ನಲ್‌ ಲೈಟ್‌ ಹಾಕದೆ ರಸ್ತೆಯಲ್ಲಿ ಸಿಮೆಂಟ್‌ ಮಿಕ್ಸರ್‌ ವಾಹನ ನಿಲುಗಡೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಸಿಮೆಂಟ್‌ ಮಿಕ್ಸರ್‌ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.