ಸಾರಾಂಶ
ಬಿಎಂಟಿಸಿ ಸಿಬ್ಬಂದಿಗೆ ರಜೆ, ಪಾಳಿ, ಚಾಲಕರಿಗೆ ಮಾರ್ಗ ನೀಡಲು ಲಂಚ ಪಡೆಯುತ್ತಿದ್ದ ಏಳು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಎಂಟಿಸಿ ಸಿಬ್ಬಂದಿಗೆ ರಜೆ, ಪಾಳಿ, ಚಾಲಕರಿಗೆ ಮಾರ್ಗ ನೀಡಲು ಲಂಚ ಪಡೆಯುತ್ತಿದ್ದ ಏಳು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಬಿಎಂಟಿಸಿ ಘಟಕ 27ರಲ್ಲಿ (ಜಿಗಣಿ) ಸಿಬ್ಬಂದಿಗೆ ರಜೆ, ಪಾಳಿ, ಚಾಲಕರಿಗೆ ಮಾರ್ಗ ನೀಡಲು ಘಟಕದ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆಂಬ ಕುರಿತು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಅದರ ಆಧಾರದಲ್ಲಿ ಬಿಎಂಟಿಸಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಇಲಾಖಾ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಿದ್ದ ಬಿಎಂಟಿಸಿ ಅಧಿಕಾರಿಗಳು, ಘಟಕದ 7 ಅಧಿಕಾರಿಗಳು ಪೇಮೆಂಟ್ ಆ್ಯಪ್‌ಗಳ ಮೂಲಕ ನೌಕರರಿಂದ ಹಣ ಪಡೆದಿರುವುದು ದೃಢಪಟ್ಟಿದೆ.
ಹೀಗಾಗಿ ಘಟಕದ ಸಿಬ್ಬಂದಿ ಮೇಲ್ವಿಚಾರಕಿ, ಕಿರಿಯ ಸಹಾಯಕರು ಸೇರಿದಂತೆ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಕ್ರಿಕೆಟ್ ಪಂದ್ಯ ವೀಕ್ಷಿಸಲು ಬರುವವರಿಗೆ ಬಸ್ ಸೇವೆ
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜ.17ರಂದು ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವವರಿಗಾಗಿ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆ ನೀಡಲಿದೆ. ಪಂದ್ಯ ಮುಕ್ತಾಯದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರ ವಿವಿಧ ಕಡೆಗಳಿಗೆ ತೆರಳುವವರಿಗೆ ತಡರಾತ್ರಿ ಬಸ್‌ಗಳು ಸಂಚರಿಸಲಿವೆ.
ಪ್ರಮುಖವಾಗಿ ಕಾಡುಗೋಡಿ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ ಕೆಎಚ್‌ಬಿ ಬಡಾವಣೆ, ನೆಲಮಂಗಲ, ಯಲಹಂಕ 5ನೇ ಹಂತ, ಆರ್‌ಕೆ ಹೆಗಡೆ ನಗರ, ಬಾಗಲೂರು, ಹೊಸಕೋಟೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.