ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಸವಾರನ ಬಲಿ ಪಡೆದ ಬಿಎಂಟಿಸಿ ವೋಲ್ವೋ ಬಸ್‌

| Published : Sep 01 2024, 01:51 AM IST / Updated: Sep 01 2024, 04:33 AM IST

ಸಾರಾಂಶ

ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಸವಾರನಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ವೋಲ್ವೋ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಸುಮಾರು 9.45ಕ್ಕೆ ಹಳೇ ಮದ್ರಾಸ್‌ ರಸ್ತೆಯ ಐಟಿಐ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

 ಬೆಂಗಳೂರು :  ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಸವಾರನಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ವೋಲ್ವೋ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಸುಮಾರು 9.45ಕ್ಕೆ ಹಳೇ ಮದ್ರಾಸ್‌ ರಸ್ತೆಯ ಐಟಿಐ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

ಕೆ.ಆರ್‌.ಪುರದ ನಿಸರ್ಗ ಬಡಾವಣೆ ನಿವಾಸಿ ಜೆ.ಎಸ್‌.ಸುಪ್ರೀತ್‌(33) ಮೃತ ಸವಾರ. ಮೈಸೂರು ಮೂಲದ ಜೆ.ಎಸ್‌.ಸುಪ್ರೀತ್‌ ಕೆ.ಆರ್‌.ಪುರದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಪತ್ನಿ ಮತ್ತು ಮಗಳೊಂದಿಗೆ ಕೆ.ಆರ್‌.ಪುರದ ನಿಸರ್ಗ ಬಡಾವಣೆಯಲ್ಲಿ ನೆಲೆಸಿದ್ದರು. ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ, ಹಳೇ ಮದ್ರಾಸ್‌ ರಸ್ತೆಯ ಐಟಿಐ ಗೇಟ್‌ ಎದುರು ರಸ್ತೆ ಬದಿ ತಮ್ಮ ಬುಲೆಟ್‌ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದರು.

ಹಿಂದಿನಿಂದ ಬುಲೆಟ್‌ ಸಹಿತ ಸವಾರನಿಗೆ ಡಿಕ್ಕಿ: ಈ ವೇಳೆ ಎಂ.ಎಂ.ದೇವಸ್ಥಾನದ ಕಡೆಯಿಂದ ಕೆ.ಆರ್‌.ಪುರ ಕಡೆಗೆ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್‌ ಏಕಾಏಕಿ ಹಿಂದಿನಿಂದ ಬುಲೆಟ್‌ ಬೈಕ್‌ ಸಹಿತ ಸವಾರ ಸುಪ್ರೀತ್‌ಗೆ ಡಿಕ್ಕಿ ಹೊಡೆದು ಮುಂದೆ ನಿಂತಿದ್ದ ಟ್ಯಾಂಕರ್‌ ವಾಹನಕ್ಕೆ ಗುದ್ದಿ ನಿಂತಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸುಪ್ರೀತ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಬಿಎಂಟಿಸಿ ವೋಲ್ವೋ ಬಸ್‌ ಚಾಲಕ ಸ್ಥಳದಲ್ಲೇ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಬಿಎಂಟಿಸಿ ಬಸ್‌, ಬುಲೆಟ್‌ ದ್ವಿಚಕ್ರ ವಾಹನ, ಟ್ಯಾಂಕರ್‌ ವಾಹನ ಹಾಗೂ ಕಾಂಕ್ರಿಟ್‌ ವಾಹನ ಜಖಂಗೊಂಡಿವೆ. ಈ ಸಂಬಂಧ ಕೆ.ಆರ್‌.ಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.