ಬೆಂಗಳೂರಿನ ಮ್ಯೂಸಿಯಂಗಳಿಗೆ ಹುಸಿ ಬಾಂಬ್‌ ಬೆದರಿಕೆ

| Published : Jan 06 2024, 02:00 AM IST / Updated: Jan 06 2024, 03:09 PM IST

ಸಾರಾಂಶ

ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ, ಅರಮನೆ ರಸ್ತೆಯ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯಗಳಿಗೆ ಇ-ಮೇಲ್‌ ಮೂಲಕ ಬಾಂಬ್ ಬೆದರಿಕೆ

ಕನ್ನಡಪ್ರಭ ವಾರ್ತೆ 

ಬೆಂಗಳೂರು: ಖಾಸಗಿ ಶಾಲೆಗಳ ಬಳಿಕ ಈಗ ನಗರದ ಪ್ರತಿಷ್ಠಿತ ವಸ್ತು ಸಂಗ್ರಹಾಲಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆಯಿತು.

ನೆಹರು ತಾರಾಲಯ, ಕಸ್ತೂರಬಾ ರಸ್ತೆಯ ಸರ್‌ ಎಂ.ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಹಾಗೂ ಅರಮನೆ ರಸ್ತೆಯ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿದ್ದವು. ಈ ಮೂರು ಕೇಂದ್ರಗಳಿಗೆ ತೆರಳಿದ ಪೊಲೀಸರು ತೀವ್ರ ತಪಾಸಣೆ ನಡೆಸಿದ ಬಳಿಕ ಹುಸಿ ಬೆದರಿಕೆ ಎಂಬುದು ಖಚಿತವಾಯಿತು.

ರಾತ್ರಿ ರವಾನೆಯಾದ ಇ-ಮೇಲ್‌ಗಳು

ಈ ಮೂರು ಸಂಗ್ರಹಾಲಯಗಳಿಗೆ ‘morgue999lol’ ಹೆಸರಿನಲ್ಲಿ ಗುರುವಾರ ರಾತ್ರಿ ಇ-ಮೇಲ್ ಬಂದಿದ್ದವು. ಇದರಲ್ಲಿ ‘we have placed bomb’ ಎಂದು ಉಲ್ಲೇಖವಾಗಿತ್ತು. ಅಲ್ಲದೆ ‘we are group of terrorizers’ ಎಂದು ಬರೆಯಲಾಗಿತ್ತು. 

ಎಂದಿನಂತೆ ಶುಕ್ರವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಆ ಮೂರು ಸಂಸ್ಥೆಗಳ ಸಿಬ್ಬಂದಿ, ತಮ್ಮ ಸಂಸ್ಥೆಯ ಅಧಿಕೃತ ಇ-ಮೇಲ್‌ಗಳಿಗೆ ಬಂದಿರುವ ಮೇಲ್‌ಗಳನ್ನು ಪರಿಶೀಲಿಸಿದ್ದರು. ಆಗ ಬೆದರಿಕೆ ಇ-ಮೇಲ್ ಓದಿ ಆತಂಕಗೊಂಡ ಅವರು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ (112)ಗೆ ಕರೆ ಮಾಡಿ ಮಾಹಿತಿ ನೀಡಿದರು. 

ತಕ್ಷಣವೇ ಮಾಹಿತಿ ತಿಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳ ಜತೆ ತೆರಳಿ ತಪಾಸಣೆ ನಡೆಸಿದರು. ಬಳಿಕ ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತವಾಯಿತು.ಈ ಸಂಬಂಧ ಪ್ರತ್ಯೇಕವಾಗಿ ವಿಧಾನಸೌಧ, ಹೈಗ್ರೌಂಡ್ಸ್ ಹಾಗೂ ಕಬ್ಬನ್ ಪಾರ್ಕ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.