ಸಾರಾಂಶ
ಬೆಂಗಳೂರು : ಸ್ಕೂಟರ್‌ಗೆ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಡಿಕ್ಕಿಯಾಗಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಘಟನೆಯಿಂದ ರೊಚ್ಚಿಗೆದ್ದ ಜನರು ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಥಣಿಸಂದ್ರ ಸಮೀಪದ ಅಶ್ವತ್ಥ್‌ನಗರದ ನಿವಾಸಿ ಶೇಖ್ ಐಮಾನ್ ಉಸಕಿ (10) ಮೃತ ದುರ್ದೈವಿ. ಘಟನೆಯಲ್ಲಿ ಮೃತನ ತಂದೆ ಖಾದರ್ ವಲಿ ಅಬ್ದುಲ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮಗನ ಜತೆ ಸ್ಕೂಟರ್‌ನಲ್ಲಿ ಅಬ್ದುಲ್ ತೆರಳುವಾಗ ಮಾರ್ಗ ಮಧ್ಯೆ ಥಣಿಸಂದ್ರ ರೈಲ್ವೆ ಹಳಿಗಳ ಸಮೀಪ ಈ ಅಪಘಾತ ನಡೆದಿದೆ. ಜನರ ಸಿಟ್ಟಿಗೆ ತುತ್ತಾದ ಕಸದ ಲಾರಿ ಭಾಗಶಃ ಆಗ್ನಿಗೆ ಆಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಗೆ ಸೇರಲು ಹೊರಟಿದ್ದ ಬಾಲಕ:
ಮೂಲತಃ ಆಂಧ್ರಪ್ರದೇಶದ ಅಬ್ದುಲ್ಲಾ ಹಲವು ವರ್ಷಗಳಿಂದ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಕುಟುಂಬದೊಂದಿಗೆ ಅಶ್ವತ್ಥ್ ನಗರದಲ್ಲಿ ಅಬ್ದುಲ್ ನೆಲೆಸಿದ್ದಾರೆ. ಮೂರನೇ ತರಗತಿ ಮುಗಿಸಿದ್ದ ಕಿರಿಯ ಪುತ್ರನನ್ನು ಬೇರೆ ಶಾಲೆಗೆ ಸೇರಿಸಲು ಭಾರತಿನಗರ ಬಳಿ ಶಾಲೆ ವಿಚಾರಿಸಲು ಪುತ್ರನನ್ನು ಕರೆದುಕೊಂಡು ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು.
ಮಾರ್ಗ ಮಧ್ಯೆ ಥಣಿಸಂದ್ರ ರೈಲ್ವೆ ಹಳಿಗಳ ಸಮೀಪ ಅವರ ಸ್ಕೂಟರ್‌ಗೆ ಹಿಂದಿನಿಂದ ಬಂದ ಕಸದ ಲಾರಿ ಗುದ್ದಿದ ರಭಸಕ್ಕೆ ಸ್ಕೂಟರ್‌ನಿಂದ ಎಡ ಭಾಗಕ್ಕೆ ತಂದೆ, ಬಲ ಭಾಗಕ್ಕೆ ಮಗ ಬಿದ್ದಿದ್ದಾರೆ. ಈ ಹಂತದಲ್ಲಿ ರಸ್ತೆಗುರುಳಿದ ಬಾಲಕನ ಮೇಲೆ ಕಸದ ಲಾರಿ ಚಕ್ರಗಳು ಹರಿದಿವೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಜನರ ತೀವ್ರ ಆಕ್ರೋಶ
ಈ ಅಪಘಾತದಿಂದ ಕೆರಳಿದ ಸ್ಥಳೀಯರು, ಕಸದ ಲಾರಿ ಚಾಲಕನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಬಳಿಕ ಲಾರಿಗೆ ಕೂಡ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಿಢೀರ್ ಪ್ರತಿಭಟನೆಯಿಂದ ಥಣಿಸಂದ್ರ ವ್ಯಾಪ್ತಿಯಲ್ಲಿ ಕೆಲ ಹೊತ್ತು ಪ್ರತಿಸ್ಥಿತಿ ಬಿಗುವಿನಿಂದ ಕೂಡಿತ್ತು. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಉತ್ತರ ವಿಭಾಗ (ಸಂಚಾರ)ದ ಡಿಸಿಪಿ ಡಿ.ಆರ್.ಸಿರಿಗೌರಿ ಹಾಗೂ ಈಶಾನ್ಯ ವಿಭಾಗ ಡಿಸಿಪಿ ವಿ.ಜೆ. ಸುಜೀತ್ ಅವರು, ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಚಾಲಕ ಪಾನಮತ್ತನಾಗಿಲ್ಲ: ವರದಿ
ಮದ್ಯ ಸೇವಿಸಿ ಲಾರಿಯನ್ನು ಚಾಲಕ ಓಡಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದರು. ಆದರೆ ವೈದ್ಯಕೀಯ ತಪಾಸಣೆ ಬಳಿಕ ಚಾಲಕ ಮದ್ಯ ಸೇವಿಸಿರಲಿಲ್ಲ ಎಂಬುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
;Resize=(690,390))
)

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))