ಕೆಂಪೇಗೌಡ ಏರ್‌ಪೋರ್ಟ್‌ ಶಾಪಲ್ಲಿ ₹3.31 ಲಕ್ಷದ 2 ದುಬಾರಿ ವಾಚ್‌ ಕದ್ದ ಬ್ರೆಜಿಲ್‌ ಪ್ರಜೆ

| Published : Jan 17 2025, 01:46 AM IST / Updated: Jan 17 2025, 04:20 AM IST

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್‌-2ರ ಶಾಪ್‌ವೊಂದರಲ್ಲಿ ವಿದೇಶಿ ಪ್ರಜೆಯೊಬ್ಬ 3.31 ಲಕ್ಷ ರು. ಮೌಲ್ಯದ ಎರಡು ದುಬಾರಿ ವಾಚ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

 ಬೆಂಗಳೂರು :ಕೆಂ ಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್‌-2ರ ಶಾಪ್‌ವೊಂದರಲ್ಲಿ ವಿದೇಶಿ ಪ್ರಜೆಯೊಬ್ಬ 3.31 ಲಕ್ಷ ರು. ಮೌಲ್ಯದ ಎರಡು ದುಬಾರಿ ವಾಚ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್‌-2ರ ನಿರ್ಗಮನ ಪ್ರದೇಶದ ‘ಇಥೋಸ್‌ ಡ್ಯೂಟಿ ಫ್ರೀ ಸ್ಟೋರ್‌’ ಎಂಬ ಶಾಪ್‌ನಲ್ಲಿ ಜ.4ರಂದು ಮುಂಜಾನೆ ಸುಮಾರು 1 ಗಂಟೆಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಪ್‌ನ ಸಿಬ್ಬಂದಿ ಶರಣಪ್ಪ ನಾದ್‌ ನೀಡಿದ ದೂರಿನ ಮೇರೆಗೆ ಬಿಐಎಎಲ್‌ ಪೊಲೀಸ್‌ ಠಾಣೆಯಲ್ಲಿ ಬ್ರೆಜಿಲ್‌ ಪ್ರಜೆ ರವಿ ಗಾಮಾ ದೇಸಾ(34) ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಆರೋಪಿ ಬ್ರೆಜಿಲ್‌ ಪ್ರಜೆ ರವಿ ಗಾಮಾ ದೇಸಾ ಜ.4ರಂದು ಮುಂಜಾನೆ ಸುಮಾರು 1 ಗಂಟೆಗೆ ಕೆಐಎ ವಿಮಾನ ನಿಲ್ದಾಣದ ಟರ್ಮಿನಲ್‌-2ರ ‘ಇಥೋಸ್‌ ಡ್ಯೂಟಿ ಫ್ರೀ ಸ್ಟೋರ್‌’ ಎಂಬ ಶಾಪ್‌ಗೆ ಬಂದಿದ್ದಾನೆ. ಬಳಿಕ ಗ್ರಾಹಕನ ಸೋಗಿನಲ್ಲಿ ಹಲವು ಬ್ರ್ಯಾಂಡ್‌ಗಳ ವಾಚ್‌ಗಳನ್ನು ವೀಕ್ಷಿಸಿದ್ದಾನೆ. ನಂತರ ಒಂದು ಸಾವಿರ ಡಾಲರ್‌ ಮೌಲ್ಯದ ಐಷಾರಾಮಿ ವಾಚ್‌ ಖರೀದಿಸಲು ಮುಂದಾಗಿದ್ದಾನೆ. ₹94,500 ಮೌಲ್ಯದ ಫೆಡರಿಕ್‌ ಕಾನ್ಸ್‌ಟ್ಯಾಂಟ್‌ ಬ್ರ್ಯಾಂಡ್‌ನ ವಾಚ್‌ ಅನ್ನು ತೆಗೆದುಕೊಂಡು ಜೇಬಿಗೆ ಇರಿಸಿಕೊಂಡಿದ್ದಾನೆ.

ಬಿಲ್ಲಿಂಗ್ ವೇಳೆ 2 ದುಬಾರಿ ವಾಚ್ ಜತೆಗೆ ಪರಾರಿ:

ಇದಾದ ಬಳಿಕ ಮತ್ತೆ ಕೆಲವು ಐಷಾರಾಮಿ ವಾಚ್‌ಗಳನ್ನು ವೀಕ್ಷಿಸಿ, ಮೂರು ವಾಚ್‌ಗಳನ್ನು ಖರೀದಿಸಲು ಆಯ್ಕೆ ಮಾಡಿದ್ದಾನೆ. ಈ ವೇಳೆ ಶಾಪ್‌ನ ಸಿಬ್ಬಂದಿ ಬಿಲ್‌ ಮಾಡಲು ಮುಂದಾಗಿದ್ದಾರೆ. ಆಗ ಆರೋಪಿಯು ಬೋರ್ಡಿಂಗ್‌ಗೆ ಸಮಯವಾಗಿದೆ ಎಂದು ಪಾಸ್‌ಪೋರ್ಟ್‌, ಬೋರ್ಡಿಂಗ್‌ ಪಾಸ್‌ ಜತೆಗೆ ಫೆಡರಿಕ್‌ ಕಾನ್ಸ್‌ಟ್ಯಾಂಟ್‌ ಬ್ರ್ಯಾಂಡ್‌ನ ₹2.37 ಲಕ್ಷ ಮೌಲ್ಯದ ಮತ್ತೊಂದು ಐಷಾರಾಮಿ ವಾಚ್‌ ಅನ್ನು ತನ್ನ ಪರ್ಸ್‌ನಲ್ಲಿ ಇರಿಸಿಕೊಂಡು ಶಾಪ್‌ನಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗ್ರಾಹಕನ ಸೋಗಿನಲ್ಲಿ ಎರಡು ದುಬಾರಿ ವಾಚ್‌ಗಳನ್ನು ಕಳವು ಮಾಡಿರುವ ವಿದೇಶಿ ಪ್ರಜೆ ರವಿ ಗಾಮಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.