ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತರಕಾರಿ ಸಾಗಾಣಿಕೆ ನೆಪದಲ್ಲಿ ಆಲೂಗೆಡ್ಡೆ ಮೂಟೆಗಳಲ್ಲಿ ನಕಲಿ ತಂಬಾಕು ಉತ್ಪನ್ನಗಳನ್ನು ಹೊರ ರಾಜ್ಯದಿಂದ ಸಾಗಿಸಿ ನಗರಕ್ಕೆ ತಂದು ಮಾರುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮುದ್ದೀನಪಾಳ್ಯದ ತಿಪ್ಪೇಸ್ವಾಮಿ ಹಾಗೂ ದೊಡ್ಡಬಸ್ತಿಯ ಫಾರೂಕ್ ಬಂಧಿತರಾಗಿದ್ದು, ಆರೋಪಿಗಳಿಂದ 10 ಲಕ್ಷ ರು. ಮೌಲ್ಯದ ಹನ್ಸ್ ಚಾಪ್ ಹೆಸರಿನ ನಕಲಿ ತಂಬಾಕು ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ದೆಹಲಿಯ ಸಿರಾಜ್ ಹಾಗೂ ಆರಿಫ್ ಪತ್ತೆಗೆ ತನಿಖೆ ನಡೆದಿದೆ. ಅಕ್ರಮವಾಗಿ ತಂಬಾಕು ಉತ್ಪನ್ನ ಸಾಗಾಣಿಕೆ ಶಂಕೆ ಮೇರೆಗೆ ಉಲ್ಲಾಳ ಕೆರೆ ಸಮೀಪ ಐಷರ್ ವಾಹನವನ್ನು ತಡೆದು ಸಿಸಿಬಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ ಕುಟುಂಬ ಜತೆ ಮುದ್ದೀನಪಾಳ್ಯದಲ್ಲಿ ನೆಲೆಸಿದ್ದ. ಕೆಲ ತಿಂಗಳ ಹಿಂದೆ ಆತನಿಗೆ ನಕಲಿ ತಂಬಾಕು ಉತ್ಪನ್ನಗಳ ಮಾರಾಟ ದಂಧೆಕೋರ ದೆಹಲಿಯ ಸಿರಾಜ್ ಪರಿಚಯವಾಗಿದೆ. ಆಗ ಹಣದಾಸೆ ತೋರಿಸಿ ತನ್ನ ಜಾಲಕ್ಕೆ ತಿಪ್ಪೇಸ್ವಾಮಿಯನ್ನು ಆತ ಸೆಳೆದಿದ್ದಾನೆ. ಬಳಿಕ ಸಿರಾಜ್ ಸೂಚನೆ ಮೇರೆಗೆ ನಗರದಲ್ಲಿ ಹನ್ಸ್ ಕಂಪನಿಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಿಪ್ಪೇಸ್ವಾಮಿ ಹಂಚಿಕೆ ಮಾಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.ದೆಹಲಿಯಿಂದ ತರಕಾರಿ ಸಾಗಾಣಿಕೆ ನೆಪದಲ್ಲಿ ಆಲೂಗಡ್ಡೆ ಮೂಟೆಗಳಲ್ಲಿ ನಕಲಿ ಹನ್ಸ್ ಚಾಪ್ ಉತ್ಪನ್ನಗಳನ್ನು ತುಂಬಿ ನಗರಕ್ಕೆ ತರುತ್ತಿದ್ದ ತಿಪ್ಪೇಸ್ವಾಮಿ, ಬಳಿಕ ಸಿರಾಜ್ ಸೂಚನೆ ಮೇರೆಗೆ ಆರಿಫ್‌ಗೆ ಆ ವಸ್ತುಗಳನ್ನು ತಲುಪಿಸುತ್ತಿದ್ದ. ನಂತರ ನಗರದ ವಿವಿಧೆಡೆ ತಂಬಾಕು ವ್ಯಾಪಾರಿಗಳಿಗೆ ಆರಿಫ್ ಪೂರೈಸುತ್ತಿದ್ದ. ಎರಡು ಬಾರಿ ದೆಹಲಿಯಿಂದ ಅಕ್ರಮವಾಗಿ ನಕಲಿ ತಂಬಾಕು ಉತ್ಪನ್ನವನ್ನು ನಗರಕ್ಕೆ ಸಾಗಿಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.