ಸಾರಾಂಶ
ಬೆಂಗಳೂರು : ಹಗಲು ಹೊತ್ತಿನಲ್ಲೇ ಮನೆಗಳಿಗೆ ಹಾಕಿದ್ದ ಬೀಗ ತೆಗೆದು ಚಿನ್ನಾಭರಣ ದೋಚುತ್ತಿದ್ದ ಕಿಡಿಗೇಡಿಯೊಬ್ಬನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 18.23 ಲಕ್ಷ ರು. ಮೌಲ್ಯದ 261 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಹೊಂಗಸಂದ್ರದ ನಿವಾಸಿ ಮೂರ್ತಿ ಬಂಧಿತ. ಗಾರೆಬಾವಿಪಾಳ್ಯದ ಪಾನಿಪುರಿ ವ್ಯಾಪಾರಿಯೊಬ್ಬರು ಕೆಲ ದಿನಗಳ ಹಿಂದೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರ ಹೋಗಿದ್ದರು. ಆ ವೇಳೆ ಅವರ ಮನೆ ಹೊರಗೆ ಹೂಕುಂಡದಲ್ಲಿಟ್ಟಿದ್ದ ಕೀ ತೆಗೆದುಕೊಂಡು ಬೀಗ ತೆರೆದು ಬೀರುವಿನಲ್ಲಿಟ್ಟಿದ್ದ ಆಭರಣವನ್ನು ಕಳವು ಮಾಡಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮನನ್ನು ಬಂಧಿಸಿದ್ದಾರೆ.
ವೃತ್ತಿಪರ ಕ್ರಿಮಿನಲ್ ಆಗಿರುವ ಮೂರ್ತಿ ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಮನೆ ಕಳ್ಳತನಕ್ಕೆ ಕುಖ್ಯಾತಿ ಪಡೆದಿದ್ದಾನೆ. ವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದ ಈತ ಹಗಲು ಹೊತ್ತಿನಲ್ಲಿ ಮನೆ ಹೊರಗೆ ಹೂಕುಂಡ, ಪಾದರಕ್ಷೆಗಳು ಹಾಗೂ ರಟ್ಟಿನ ಬಾಕ್ಸ್ ಹೀಗೆ ಇತರ ಕಡೆ ಕೀ ಇಟ್ಟು ಹೋಗುವವರ ಮನೆಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳತನ ಬಿಟ್ಟರೇ ಕೆಲಸದ ಭರವಸೆ:
ಬಂಧಿತ ಮೂರ್ತಿ ಬಿ.ಕಾಂ ಪದವೀಧರನಾಗಿದ್ದು, ಕಳ್ಳತನ ಮಾಡುವುದನ್ನು ಬಿಟ್ಟರೆ. ಈ ಕೇಸ್‌ನಲ್ಲಿ ಜಾಮೀನು ಪಡೆದುಕೊಂಡು ಬಂದ ಬಳಿಕ ಕೆಲಸ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.