ಬೈಕ್‌ಗೆ ಕ್ಯಾಂಟರ್‌ ಡಿಕ್ಕಿ: ಮಹಿಳಾ ಟೈಲರ್‌ ಬಲಿ

| Published : Feb 18 2024, 01:33 AM IST

ಸಾರಾಂಶ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್‌ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ಮೇಲೆ ಕ್ಯಾಂಟರ್‌ ವಾಹನದ ಚಕ್ರ ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್‌ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ಮೇಲೆ ಕ್ಯಾಂಟರ್‌ ವಾಹನದ ಚಕ್ರ ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಗೊಲ್ಲಹಳ್ಳಿ ನಿವಾಸಿ ಮಂಜುಳಾ (40) ಮೃತರು.

ಮಂಡ್ಯ ಮೂಲದ ಮಂಜುಳಾ ವೃತ್ತಿಯಲ್ಲಿ ಟೈಲರ್‌ ಆಗಿದ್ದು, ಕುಟುಂಬದ ಜತೆಗೆ ನಗರದ ಕೆ.ಗೊಲ್ಲಹಳ್ಳಿಯಲ್ಲಿ ನೆಲೆಸಿದ್ದರು. ಶನಿವಾರ ಬೆಳಗ್ಗೆ ಉತ್ತರಹಳ್ಳಿ ರಸ್ತೆಯಲ್ಲಿ ಮೈಸೂರು ರಸ್ತೆಗೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಸಾವನ ದರ್ಬಾರ ಆಶ್ರಮದ ಬಳಿ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್‌ ವಾಹನ, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಮಂಜುಳಾ ದೇಹದ ಮೇಲೆಯೇ ಕ್ಯಾಂಟರ್ ವಾಹನದ ಚಕ್ರಗಳು ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಕ್ಯಾಂಟರ್‌ ವಾಹನವನ್ನು ಜಪ್ತಿ ಮಾಡಿ ಚಾಲಕ ಜಾನಕಿರಾಮ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕ್ಯಾಂಟರ್‌ ವಾಹನದ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.