ಚಾಮರಾಜನಗರ-ಜೀವರ್ಗಿ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ವೃದ್ಧರೊಬ್ಬರು ಸಾವು, ಮೂವರಿಗೆ ಗಾಯ

| Published : Sep 07 2024, 01:36 AM IST / Updated: Sep 07 2024, 04:13 AM IST

ಸಾರಾಂಶ

ಚಾಮರಾಜನಗರ-ಜೀವರ್ಗಿ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

  ನಾಗಮಂಗಲ : ಕಾರು ಡಿಕ್ಕಿಯಾಗಿ ರಸ್ತೆ ಬದಿ ಅರಳಿಕಟ್ಟೆ ಮೇಲೆ ಕುಳಿತಿದ್ದ ವಯೋವೃದ್ಧ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮದೇವರಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ತಾಲೂಕಿನ ಇಜ್ಜಲಘಟ್ಟ ಗ್ರಾಮದ ಸಿಂಗ್ರೇಗೌಡರ ಪುತ್ರ ಬೆಟ್ಟಪ್ಪ (70) ಸ್ಥಳದಲ್ಲೇ ಸಾವನ್ನಪ್ಪಿದವರು.

ಘಟನೆಯಲ್ಲಿ ಕಾಲು ಮುರಿದಿರುವ ಬ್ರಹ್ಮದೇವರಹಳ್ಳಿಯ 8 ವರ್ಷದ ಬಾಲಕ ವರುಣ್, ಗಾಯಗೊಂಡಿರುವ ಇಜ್ಜಲಘಟ್ಟದ ರಾಮೇಗೌಡ ಹಾಗೂ ರಾಜಸ್ಥಾನ ಮೂಲದ ಪಾನಿಪೂರಿ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ರಹ್ಮದೇವರಹಳ್ಳಿ ಸರ್ಕಲ್‌ನ ಹೆದ್ದಾರಿ ರಸ್ತೆಬದಿಯ ಅರಳಿಕಟ್ಟೆ ಮೇಲೆ ಬೆಟ್ಟಪ್ಪ ಸೇರಿದಂತೆ ನಾಲ್ಕೈದು ಮಂದಿ ಕುಳಿತಿದ್ದರು. ಈ ವೇಳೆ ಮೈಸೂರಿನಿಂದ ನಾಗಮಂಗಲ ಕಡೆಗೆ ಟಾಟಾ ಪಂಚ್ ಕಾರು ಚಾಲನೆ ಮಾಡುತ್ತಿದ್ದ ತಾಲೂಕಿನ ಹಾಲ್ತಿ ಗ್ರಾಮದ ಶ್ರೀನಿವಾಸ್ ಅತಿವೇಗ ಮತ್ತು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಪಾನಿಪೂರಿ ಗಾಡಿಗೆ ಡಿಕ್ಕಿ ಹೊಡೆದು ನಂತರ ಅರಳಿ ಕಟ್ಟೆ ಮೇಲೆ ಕುಳಿತಿದ್ದ ಜನರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ನಿದ್ರೆ ಮಂಪರಿನಿಲ್ಲಿದ್ದ ಕಾರು ಚಾಲಕನ ಅಜಾರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ವಯೋವೃದ್ಧ ಬೆಟ್ಟಪ್ಪ ಸ್ಥಳದಲ್ಲೇ ಸಾವನ್ನಪ್ಪಿದರೆ, 8 ವರ್ಷದ ಬಾಲಕ ವರುಣ್ ಕಾಲು ಮುರಿದು ಇನ್ನಿಬ್ಬರು ಗಾಯಗೊಂಡಿದ್ದಾರೆ. ಪಾನಿಪೂರಿ ಅಂಗಡಿ ಜಖಂಗೊಂಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟು ಬೆಟ್ಟಪ್ಪ ಅವರ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಳದಂಡಿ ಶುಕ್ರವಾರ ಸಂಜೆ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದರು. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಳಕುಪ್ಪೆ ಗ್ರಾಮದ ವ್ಯಕ್ತಿ ನಾಪತ್ತೆ

ಶ್ರೀರಂಗಪಟ್ಟಣ:ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ವ್ಯಕ್ತಿ ನಾಪತ್ತೆಯಾಗಿರುವ ಸಂಬಂಧ ದೂರು ದಾಖಲಾಗಿದೆ. ಗ್ರಾಮದ ಲೇ ಕೆಂಪೂಗೌಡರ ಪುತ್ರ ಎ.ಕೆ ಚಂದು (34) ನಾಪತ್ತೆಯಾದವರು. ನನ್ನ ಮಗ ಮೈಸೂರು ಕೈಗಾರಿಕಾ ವಲಯದ ಬಸ್ತೀಪುರ ಬಳಿಯ ಶಾಶ್ವತಿ ಪ್ಲಾಸ್ಟಿಕ್ ಸಣ್ಣ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಸೆ.2 ರಂದು ಬೆಳಗ್ಗೆ 10 ಗಂಟೆಯಲ್ಲಿ ಮನೆಯಿಂದ ತನ್ನ ಮೋಟಾರ್ ಸೈಕಲ್ ಕೆಎ 11, ಇವಿ 0509 ನೊಂದಿಗೆ ಹೋದವನು ಮರಳಿ ಬಂದಿಲ್ಲ. ಪತ್ನಿ ಮನೆಗೂ ಹೋಗದೆ ಇಲ್ಲಿಯವರೆವಿಗೂ ಮರಳಿ ಮನೆಗೆ ಬಂದಿಲ್ಲ. ಪೋನ್ ಸಹ ಸ್ವಚ್ ಆಫ್ ಆಗಿದೆ.

ಆತನ ಸ್ನೇಹಿತರು, ನಮ್ಮ ಸಂಬಂಧಿಕರು ಇತರ ಕಡೆಗಳಲ್ಲಿ ವಿಚಾರಿಸಲಾಗಿ ಆತನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹುಡುಕಿಕೊಡುವಂತೆ ತಾಯಿ ಶಕುಂತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವ್ಯಕ್ತಿ ಕಾಣೆಯಾದ ವೇಳೆ ನೀಲಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದು, ಬಲಗಡೆ ಕತ್ತಿನಲ್ಲಿ ಸ್ಟಾರ್ ಗುರುತು, ಬಲಗೈನಲ್ಲಿ ಆಂಜನೇಯ ಚಿತ್ರದ ಹಸಿರು ಹಚ್ಚೆ ಇದೆ. ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.