ಸಾರಾಂಶ
ಸಂಬಂಧಿಕರ ನಿಶ್ಚಿತಾರ್ಥ ಮುಗಿಸಿ ಹೋಗುತ್ತಿದ್ದ ಕಾರು ಮತ್ತೊಂದು ಕಾರಿಗೆ ಗುದ್ದಿ, ಮರ, ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಚಾಲಕ ಸಾವನ್ನಪ್ಪಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಯಂತ್ರಣ ತಪ್ಪಿದ ಕಾರೊಂದು ನಿಂತಿದ್ದ ಕಾರು ನಂತರ ಮರ ಹಾಗೂ ಮನೆಯೊಂದರ ಗೇಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹೊರಮಾವು ನಿವಾಸಿ ಮೆಲ್ವಿನ್ ಜೋಸ್ವಾ (25) ಮೃತ ಚಾಲಕ. ಈತನ ಸ್ನೇಹಿತೆ ಆಡಿಲಿನ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಹೆಣ್ಣೂರು ರಸ್ತೆ ಕಡೆಯಿಂದ ಹೊರಮಾವು ಕಡೆಗೆ ಬರುವಾಗ ಸಿಎಂಆರ್ ರಸ್ತೆಯಲ್ಲಿ ಈ ಅಪಘಾತ ನಡೆದಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮೆಲ್ವಿನ್ ಭಾನುವಾರ ರಾತ್ರಿ ಹೆಣ್ಣೂರು ರಸ್ತೆಯಲ್ಲಿ ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಸ್ನೇಹಿತೆ ಆಡಿಲಿನ್ ಜತೆಗೆ ಕಾರಿನಲ್ಲಿ ಹೊರಮಾವಿನಲ್ಲಿರುವ ಮನೆಗೆ ಬರುತ್ತಿದ್ದ. ಸಿಎಂಆರ್ ರಸ್ತೆಯಲ್ಲಿ ಬರುವಾಗ ಅತಿವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲುಗಡೆ ಮಾಡಿದ ಕಾರೊಂದಕ್ಕೆ ಡಿಕ್ಕಿಯಾಗಿ ಬಳಿಕ ಮರಕ್ಕೆ ಗುದ್ದಿ ಸಮೀಪದ ಮನೆಯೊಂದರ ಗೇಟ್‌ಗೆ ಡಿಕ್ಕಿಯಾಗಿ ನಿಂತಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮೆಲ್ವಿನ್‌ನನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಆತನ ಸ್ನೇಹಿತೆ ಆಡಿಲಿನ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಒಂದೇ ಕೈಯಲ್ಲಿ ಚಾಲನೆ!ಕೆಲ ವರ್ಷಗಳ ಹಿಂದೆ ಮೆಲ್ವಿನ್ ದ್ವಿಚಕ್ರ ವಾಹನ ಚಲಾಯಿಸುವಾಗ ಅಪಘಾತವಾಗಿ ಕೈಗೆ ಗಂಭೀರ ಪೆಟ್ಟು ಬಿದ್ದು ಸ್ವಾಧೀನ ಕಳೆದುಕೊಂಡಿದ್ದ. ರಾತ್ರಿ ಕಾರನ್ನು ಒಂದೇ ಕೈಯಲ್ಲಿ ವೇಗವಾಗಿ ಓಡಾಡಿಸಿಕೊಂಡು ಬರುವಾಗ ನಿಯಂತ್ರಿಸಲು ಸಾಧ್ಯವಾಗದೆ ಅಪಘಾತ ಎಸಗಿರುವ ಸಾಧ್ಯತೆಯಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.