ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ವ್ಯಕ್ತಿ ಸಾವು

| Published : Nov 27 2024, 01:01 AM IST

ಸಾರಾಂಶ

ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯ ಅಫೀಜ್ ಉಲ್ಲಾಖಾನ್ (ವಂದರಿ ಬಾಬು) ಪುತ್ರ ಮಹಮ್ಮದ್ ಇಸ್ಮಾಯಿಲ್ (36) ಮೃತಪಟ್ಟವರು. ಕಾರ್ಯನಿಮಿತ್ತ ಮೈಸೂರಿಗೆ ಹೋಗಿ ಸ್ವಗ್ರಾಮಕ್ಕೆ ವಾಪಸ್ ಬರುವಾಗ ಬಸವನಪುರ ಗ್ರಾಮ ಬಳಿ ಹಲಗೂರು ಕಡೆಯಿಂದ ಮಳವಳ್ಳಿ ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಮ್ಮದ್ ಇಸ್ಮಾಯಿಲ್ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಕಾರು- ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 209ರ ಬಸವನಪುರ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿದೆ.

ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯ ಅಫೀಜ್ ಉಲ್ಲಾಖಾನ್ (ವಂದರಿ ಬಾಬು) ಪುತ್ರ ಮಹಮ್ಮದ್ ಇಸ್ಮಾಯಿಲ್ (36) ಮೃತಪಟ್ಟವರು.

ಕಾರ್ಯನಿಮಿತ್ತ ಮೈಸೂರಿಗೆ ಹೋಗಿ ಸ್ವಗ್ರಾಮಕ್ಕೆ ವಾಪಸ್ ಬರುವಾಗ ಬಸವನಪುರ ಗ್ರಾಮ ಬಳಿ ಹಲಗೂರು ಕಡೆಯಿಂದ ಮಳವಳ್ಳಿ ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಮ್ಮದ್ ಇಸ್ಮಾಯಿಲ್ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಪತ್ನಿ ಹಾಗೂ ಮಗು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮ್ಯೆಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಮಳವಳ್ಳಿ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರಿಗೆ ನೀಡಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ ಕ್ರಿಮಿನಾಶಕ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ

ಮಳವಳ್ಳಿ:

ಸಾಲಭಾದೆಯಿಂದ ಕ್ರಿಮಿನಾಶಕ ಔಷಧಿ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತಮ್ಮಡಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಕೆಂಪಯ್ಯರ ಪತ್ನಿ ರೈತ ಮಹಿಳೆ ಕೆಂಪಮ್ಮ(50) ಸಾವನ್ನಪ್ಪಿದ ದುರ್ದೈವಿ.

ಸುಮಾರು ಒಂದು ಎಕರೆ ಜಮೀನು ಹೊಂದಿದ್ದ ರೈತ ಮಹಿಳೆ ಕೆಂಪಮ್ಮ ವ್ಯವಸಾಯದ ಜವಾಬ್ದಾರಿ ಹೊತ್ತಿದ್ದರು. ವ್ಯವಸಾಯದ ಖರ್ಚಿಗಾಗಿ ಸಹಕಾರ ಸಂಘ, ಸ್ತ್ರೀಶಕ್ತಿ ಸಂಘ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಸುಮಾರು 4 ಲಕ್ಷ ರು. ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಿರೀಕ್ಷಿತ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ಮನನೊಂದಿದ್ದ ಕೆಂಪಮ್ಮ ಸೋಮವಾರ ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಕಾಳುಗಳನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ನಂತರ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ರೈತ ಮಹಿಳೆಯ ಪತಿ ಕೆಂಪಯ್ಯ ನೀಡಿರುವ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯುಧದಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

ನಂಜನಗೂಡು:

ಪಟ್ಟಣದ ಫ್ಲೈ ಓವರ್ (ರೈಲ್ವೆ ಮೇಲ್ಸೇತುವೆ)ಯು ಸರ್ವಿಸ್ ರಸ್ತೆಯಲ್ಲಿ ವ್ಯಕ್ತಿ ಒಬ್ಬನನ್ನು ಆಯುಧದಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆಗೈದಿರುವ ಘಟನೆ ಮಂಗಳವಾರ ಜರುಗಿದೆ.

ಪಟ್ಟಣದ ಚಾಮಲಾಪುರ ಹುಂಡಿ ಗ್ರಾಮದ ಮಾದೇಶ (55) ಕೊಲೆಯಾದ ದುರ್ದೈವಿ.

ಗಾರೆ ಕೆಲಸ ಮಾಡಿಕೊಂಡಿದ್ದ ಮಾದೇಶ ಮಂಗಳವಾರ ಮಧ್ಯಾಹ್ನ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಪಟ್ಟಣದ ಫ್ಲೈಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಕುಡಿದು ಪಾರ್ಟಿ ನಡೆಸಿದ್ದರು. ಇದೆ ವೇಳೆ ಮಧ್ಯದ ವಿಚಾರಕ್ಕೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಅಂತಿಮವಾಗಿ ಸ್ನೇಹಿತರೆ ಆಯುಧದಿಂದ ಮತ್ತು ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಯಾರೋ ದುಷ್ಕರ್ಮಿಗಳು ನನ್ನ ತಂದೆಯನ್ನು ಕುತ್ತಿಗೆಗೆ ಟವಲ್ ಬಿಗಿದು, ಆಯುಧದಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದು. ಕೊಲೆಗೈದಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಮೃತ ಮಾದೇಶನ ಪುತ್ರ ರಾಜು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಇನ್ಸ್‌ ಪೆಕ್ಟರ್‌ ಸುನಿಲ್ ಕುಮಾರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ತನಿಖೆ ಮುಂದುವರಿಸಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.