ಸಾರಾಂಶ
ತನ್ನ ಎರಡು ಮಕ್ಕಳನ್ನು ಕೆಸ್ತೂರು ಗ್ರಾಮದಲ್ಲಿ ಬಿಟ್ಟು ತಲೆಮರೆಸಿ ಕೊಂಡಿದ್ದ ಗಿರೀಶ್‌ನನ್ನು ಪಿಎಸ್ಐ ನರೇಶ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಲಾಡ್ಜ್ ಒಂದರಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ ನಡೆದ ಗೃಹಿಣಿ ಎಂ.ಜೆ.ದಿವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಗಿರೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ನಂತರ ಜಿಮ್ ನಲ್ಲಿದ್ದ ಸಿಸಿ ಟಿವಿಗಳಲ್ಲಿ ದಾಖಲಾಗಿದ್ದ ಪುಟ್ಟೇಜುಗಳನ್ನು ನಾಶಪಡಿಸಿದ ಬಳಿಕ ತನ್ನ ಎರಡು ಮಕ್ಕಳನ್ನು ಕೆಸ್ತೂರು ಗ್ರಾಮದಲ್ಲಿ ಬಿಟ್ಟು ತಲೆಮರೆಸಿ ಕೊಂಡಿದ್ದ ಗಿರೀಶ್‌ನನ್ನು ಸೋಮವಾರ ರಾತ್ರಿ ಪಿಎಸ್ಐ ನರೇಶ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಲಾಡ್ಜ್ ಒಂದರಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ದಿವ್ಯಾಳನ್ನು ಗಿರೀಶ್ ನೇಣು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ರೊಚ್ಚಿಗೆದ್ದ ಆಕೆಯ ಪೋಷಕರು ಕೆಸ್ತೂರಿನಲ್ಲಿ ಗಿರೀಶನ ಮಾಲೀಕತ್ವದ ವೈಭವ್ ಫಿಟ್ನೆಸ್ ಜಿಮ್‌ಗೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗೆ ಶರಣಾಗಿದ್ದ ದಿವ್ಯಾಳ ಶವವನ್ನು ರಾತ್ರಿಯೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಲಾಯಿತು. ಬಳಿಕ ಹುಟ್ಟೂರು ಮಾಚಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಿವ್ಯ ಹಾಗೂ ಗಿರೀಶ್ ಕಳೆದ 10 ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಕಳೆದ 9 ವರ್ಷಗಳ ಹಿಂದೆ ವಿವಾಹವಾಗಿದ್ದರು.ಪ್ರಾರಂಭದಲ್ಲಿ ಇಬ್ಬರು ಸಂತೋಷದಿಂದ ದಾಂಪತ್ಯ ಜೀವನ ನಡೆಸಿದ್ದರು. ಈ ಮಧ್ಯೆ ಗಿರೀಶ್ ಬಸವಲಿಂಗನ ದೊಡ್ಡಿ ಗ್ರಾಮದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲೆನ್ನಲಾಗಿದೆ. ಈ ವಿಚಾರವಾಗಿ ದಿವ್ಯ ಹಾಗೂ ಗಿರೀಶ್ ನಡುವೆ ಕಲಹ ನಡೆದಿತ್ತು. ಇದರಿಂದ ದಂಪತಿ ನಡುವೆ ಸೋಮವಾರ ಗಲಾಟೆ ನಡೆದ ಹಿನ್ನೆಲೆಯಲ್ಲಿ ಗಿರೀಶ್ ದಿವ್ಯಾಳ ಮೇಲೆ ಹಲ್ಲೆ ಮಾಡಿ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ದಿವ್ಯಾಳ ಸಹೋದರಿ ಕಾವ್ಯ ಆಕೆ ಚಿಕ್ಕಮ್ಮ ಗಂಭೀರ ಆರೋಪ ಮಾಡಿದ್ದಾರೆ.
ಕೆಸ್ತೂರು ಪೊಲೀಸರು ದಿವ್ಯಳ ಆತ್ಮಹತ್ಯೆ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡು ಇದು ಆತ್ಮಹತ್ಯೆ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.