ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ನೆರೆಯ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಬರೋಬ್ಬರಿ 100 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಪ್ರಸಾದ್ ಬಾಬು(30) ಬಂಧಿತ. ಆತನಿಂದ ಜಪ್ತಿ ಮಾಡಿದ ನೂರು ದ್ವಿಚಕ್ರ ವಾಹನಗಳ ಮೌಲ್ಯ ₹1.45 ಕೋಟಿ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಕೆ.ಆರ್.ಪುರದ ಗಾಯತ್ರಿ ಲೇಔಟ್ ನಿವಾಸಿಯೊಬ್ಬರು ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದ್ದ ಬೈಕ್ ಸಮೇತ ಸಿಕ್ಕಿ ಬಿದ್ದ:
ಪ್ರಕರಣದ ತನಿಖೆ ವೇಳೆ ಹೊಸಕೋಟೆ ಟೋಲ್ ಸಮೀಪ ದ್ವಿಚಕ್ರ ವಾಹನ ಸಹಿತ ಪ್ರಸಾದ್ ಬಾಬುನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕೆ.ಆರ್.ಪುರ ಬಳಿ ದ್ವಿಚಕ್ರ ವಾಹನ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಟೌನ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
100 ಬೈಕ್‌ಗಳ ಜಪ್ತಿ:
ಆರೋಪಿ ಪ್ರಸಾದ್ ಬಾಬು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಬಂಗಾರಪಾಳ್ಯದ ಬಾಯಿಕೊಂಡ ದೇವಸ್ಥಾನದ ಬಳಿ 6 ದ್ವಿಚಕ್ರ ವಾಹನ, ಬಂಗಾರಪಾಳ್ಯ ಜಾಮಿಯಾ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ 33, ಗಂಗಾವರ ಠಾಣಾ ವ್ಯಾಪ್ತಿಯಲ್ಲಿ 18, ಬಂಗಾರಪಾಳ್ಯದಲ್ಲಿ 13, ಬಂಗಾರಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11, ಚಿತ್ತೂರು-ಬೆಂಗಳೂರು ಹೆದ್ದಾರಿ ಡಾಬಾವೊಂದರ ಬಳಿ 11, ಆಂಧ್ರಪ್ರದೇಶದ ಪಲಮನೇರಿನಲ್ಲಿ 7 ಸೇರಿ ವಿವಿಧ ಕಂಪನಿಗಳ ಒಟ್ಟು 100 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
51 ಬೈಕ್ ಕಳವು ಪ್ರಕರಣ ಪತ್ತೆ:
ಆರೋಪಿಯ ಬಂಧನದಿಂದ ಬೆಂಗಳೂರು, ಕೋಲಾರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 51 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ 49 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ. ಈ ಖತರ್ನಾಕ್ ಕಳ್ಳನ್ನು ಬಂಧಿಸಿದ ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶ್ಲಾಘಿಸಿ, ತಂಡಕ್ಕೆ ₹50 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಬೈಕ್ ಕಳ್ಳತನವೇ ಕಸುಬು:
ಆಂಧ್ರಪ್ರದೇಶದ ಚಿತ್ತೂರು ಮೂಲದ ಪ್ರಸಾದ್ ಬಾಬು 5ನೇ ತರಗತಿ ವ್ಯಾಸಂಗ ಮಾಡಿದ್ದಾನೆ. ಕೆಲ ವರ್ಷಗಳ ಹಿಂದೆ ಕೆ.ಆರ್.ಪುರದಲ್ಲಿ ನೆಲೆಸಿ ಚಾಲಕ ಮತ್ತು ಮೆಕ್ಯಾನಿಕ್ ಕೆಲಸ ಮಾಡಿದ್ದ. ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನಗಳ ಕಳವು ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. 24 ರಾಯಲ್ ಎನ್‌ಫೀಲ್ಡ್, 16 ಸುಜುಕಿ ಆಕ್ಸಿಸ್, 16 ಪಲ್ಸರ್ ಸೇರಿದಂತೆ ವಿವಿಧ ಕಂಪನಿಗಳ ಬರೋಬ್ಬರಿ 100 ದ್ವಿಚಕ್ರ ವಾಹನ ಕಳವು ಮಾಡಿದ್ದ.
ಬಸ್‌ನಲ್ಲಿ ಬಂದು ಬೈಕ್ ಕದ್ದು ಪರಾರಿ:
ಆರೋಪಿ ಪ್ರಸಾದ್ ಬಾಬು ಆಂಧ್ರಪ್ರದೇಶದಿಂದ ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದ. ರಾತ್ರಿ ವೇಳೆ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನದ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ ಅದೇ ದ್ವಿಚಕ್ರ ವಾಹನದಲ್ಲಿ ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದ. ಬಳಿಕ ಪರಿಚಿತ ವ್ಯಕ್ತಿಗಳಿಗೆ ಕಡಿಮೆ ಬೆಲೆ ಆ ದ್ವಿಚಕ್ರ ವಾಹನ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲೇ ಆರೋಪಿ 23 ದ್ವಿಚಕ್ರ ವಾಹನ ಕಳವು ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಫಿಲ್ಮಿ ಸ್ಟೈಲ್‌ನಲ್ಲಿ ಸವಾಲು ಹಾಕಿದ್ದ ಸೆಂಚೂರಿ ಸ್ಟಾರ್!
ನೂರು ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿ ಪ್ರಸಾದ್ ಬಾಬು ತೆಲುಗು ಚಿತ್ರವೊಂದರಲ್ಲಿ ನಾಯಕ ತಾಕತ್ ಇದ್ದರೆ ತನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಸವಾಲು ಹಾಕುವ ಫೋಟೋವನ್ನು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದ. ಈ ಮೂಲಕ ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಪರೋಕ್ಷವಾಗಿ ಸವಾಲು ಹಾಕಿದ್ದ.