ಸಾರಾಂಶ
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಲಿನ ವಿಚಾರದಲ್ಲಿ ಗಾಲಿ ಜನಾರ್ದನರೆಡ್ಡಿ ನನ್ನ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಧಾ ಮೋಹನ್‌ರಾವ್ ಅವರಿಗೆ ಸುಳ್ಳು ಚಾಡಿ ಹೇಳಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರವಾಗಿ ಆಪಾದಿಸಿದ್ದಾರೆ.
ಬೆಂಗಳೂರು : ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೋಲಿನ ವಿಚಾರದಲ್ಲಿ ಗಾಲಿ ಜನಾರ್ದನರೆಡ್ಡಿ ನನ್ನ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಧಾ ಮೋಹನ್‌ರಾವ್ ಅವರಿಗೆ ಸುಳ್ಳು ಚಾಡಿ ಹೇಳಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರವಾಗಿ ಆಪಾದಿಸಿದ್ದಾರೆ.
ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡುವೆ ಎಂದೂ ಅವರು ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕುಟುಂಬದ ಮೇಲೆ ಜನಾರ್ದನರೆಡ್ಡಿ ಅವರಿಗೆ ಸೇಡಿದೆ. ರಾಜಕೀಯವಾಗಿ ನಮ್ಮ ಕುಟುಂಬವನ್ನು ಮುಗಿಸುವ ಸಲುವಾಗಿಯೇ ನಮ್ಮ ವಿರುದ್ಧ ದೂರು ಹೇಳಿದ್ದಾರೆ. ಉಪ ಚುನಾವಣೆ ಸೋಲಿಗೆ ನಾನು ಕಾರಣ ಎಂದು ಬಿಂಬಿಸಿದ್ದಾರೆ. ಇದನ್ನು ಆಧರಿಸಿಯೇ ರಾಧಾ ಮೋಹನ್ ರಾವ್ ಅವರು ಸಭೆಯಲ್ಲಿ ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಮೂರನೇ ವ್ಯಕ್ತಿಯ ಮಾತು ಕೇಳಿ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ವರಿಷ್ಠರು ಈ ಬಗ್ಗೆ ಪರಿಶೀಲಿಸಬೇಕು ಎಂದು ಶ್ರೀರಾಮುಲು ಆಗ್ರಹಿಸಿದ್ದಾರೆ.
‘ಇದು ನನ್ನ ಅಸ್ತಿತ್ವದ ಪ್ರಶ್ನೆ. ಜನಾರ್ದನ ರೆಡ್ಡಿ ಅವರು ನನ್ನನ್ನು ವೈರಿಯಂತೆ ಭಾವಿಸಿ ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ನನ್ನ ಮೇಲೆ ಕಳಂಕ ಬಂದರೂ ಸುಮ್ಮನಿರಲು ಸಾಧ್ಯವೇ? ಉಪ ಚುನಾವಣೆ ಸೋಲು ನನ್ನ ಮೇಲೆ ಹೊರಸಿದಾಗ ಪ್ರಾಮಾಣಿಕ, ಸತ್ಯವಂತನಾದ ನನಗೆ ಸಿಟ್ಟು ಬಂದಿದ್ದು ಸಹಜ. ಹೀಗಾಗಿ ನಾನು ರಾಧಾ ಮೋಹನ್ ಅವರ ಬಳಿಯೇ ಮಾತನಾಡುವಂತಾಯಿತು’ ಎಂದು ಹೇಳಿದ್ದಾರೆ.
‘ಪಕ್ಷಕ್ಕಾಗಿ ನಾನು ಹೇಗೆ ದುಡಿದಿದ್ದೇನೆ ಎಂಬುದು ನನಗೆ ಗೊತ್ತಿದೆ. ರೆಡ್ಡಿ ಅವರು ಇತ್ತೀಚೆಗೆ ಬಳ್ಳಾರಿಗೆ ಬಂದ ಮೇಲೆ ರಾಜಕೀಯ ಗುಂಪುಗಾರಿಕೆ ಹುಟ್ಟುಕೊಂಡಿದೆ. ಅವರ ಬೆಂಬಲಿಗರನ್ನು ಬಳಸಿಕೊಂಡು ನಮ್ಮ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆ. ಪಕ್ಷದಲ್ಲಿ ಗುಂಪುಗಾರಿಕೆ ಶುರುವಾಗುವುದು ಬೇಡ ಎಂದು ಪಕ್ಷದ ಗಮನಕ್ಕೆ ಇವೆಲ್ಲವನ್ನೂ ತಂದಿರಲಿಲ್ಲ. ಈಗ ವಿಧಿ ಇಲ್ಲದೇ ಮಾತನಾಡಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರೆಡ್ಡಿ ಅವರು ನನ್ನ ಮೇಲೆ ದೂರಿರುವ ಕಾರಣದಿಂದಲೇ ಉಸ್ತುವಾರಿ ರಾಧಾ ಮೋಹನ್ ರಾವ್ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ. ಅಂದುಕೊಂಡಿದ್ದೇ ಆಗಬೇಕು ಎಂಬ ಧೋರಣೆ ರೆಡ್ಡಿ ಅವರದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಅಂದುಕೊಂಡಿದ್ದು ಆಗಬೇಕೆ ಹೊರತು ಒಬ್ಬ ವ್ಯಕ್ತಿಯ ನಿರ್ಧಾರಕ್ಕೆ ಪಕ್ಷ ನಡೆಯಬಾರದು. ನಾನು ಎಂದೂ ಜನಾರ್ದನ ರೆಡ್ಡಿಗೆ ಕೇಡು ಬಯಸಿಲ್ಲ. ಆದರೆ ಅವರು ರಾಜಕೀಯವಾಗಿ ನಮ್ಮನ್ನು ಮುಗಿಸಲು ಹೊರಟಿದ್ದಾರೆ’ ಎಂದು ಕಿಡಿಕಾರಿದ್ದಾರೆ.