ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಗೋಕಾಕದ ನಿವಾಸಿ ಸಿದ್ದನಗೌಡ ಬಿರಾದಾರ ಅವರನ್ನು ವಂಚನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸರು ಮಹಿಳೆ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನೀಲ ವಿಭೂತಿ, ಸಚಿನಕುಮಾರ ಅಂಬ್ಲಿ, ಭರತೇಶ ಅಗಸರ ಮತ್ತು ಶಶಾಂಕ ರಾವಸಾಹೇಬ ದೊಡ್ಡಣ್ಣವರ ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಎರಡು ವಾಹನ ಹಾಗೂ ₹11 ಲಕ್ಷ ನಗದು ಸೇರಿದಂತೆ ಒಟ್ಟು ₹22 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದನಗೌಡ ಬಿರಾದಾರ ಕೊಲ್ಲಾಪುರಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಈ ವಂಚಕರ ತಂಡ ಪರಿಚಯ ಮಾಡಿಕೊಂಡಿತ್ತು. ಈ ವೇಳೆ ವಂಚಕಿ ಮತ್ತು ಬಿರಾದಾರ ಪರಸ್ಪರ ಮೊಬೈಲ್ ನಂಬರ ವಿನಿಮಯ ಮಾಡಿಕೊಂಡಿದ್ದರು. 15 ದಿನಗಳ ಕಾಲ ಇಬ್ಬರ ನಡುವೆ ಮೊಬೈಲ್ ಸಮರ್ಪಕದಲ್ಲಿದ್ದರು. ಬಳಿಕಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, ಬಿರಾದಾರಕಡೆಯಿಂದ ₹25 ಲಕ್ಷ ಪಡೆದಿದ್ದರು. ಈ ವೇಳೆ ಹೋಟೆಲ್‌ಗೆ ನಕಲಿ ಪೊಲೀಸರ ತಂಡ ಆಗಮಿಸಿ,ಹಣ ಸಮೇತವಾಗಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಈ ಸಂಬಂಧ ವಂಚನೆಗೊಳಗಾದ ಸಿದ್ದನಗೌಡ ಬಿರಾದಾರ ಅವರನ್ನು ಕಾಕತಿ ಠಾಣೆಗೆದೂರು ನೀಡಿದ್ದರು.