ಸಾರಾಂಶ
ಹಲಗೂರು : ವಿದ್ಯುತ್ ಕಂಬ ಬದಲಾವಣೆ ಕೆಲಸದಲ್ಲಿ ನಿರತನಾಗಿದ್ದ ಚೆಸ್ಕಾಂ ಸಿಬ್ಬಂದಿ ಅಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕುಲುಮೆದೊಡ್ಡಿ ಗ್ರಾಮದ ಅಲೆಮನೆ ತಮ್ಮಯ್ಯರ ಪುತ್ರ ಟಿ.ಅನಿಲ್ (30) ಮೃತ ವ್ಯಕ್ತಿ.
ಚೆಸ್ಕಾಂ ಮಳವಳ್ಳಿ ಉಪ ವಿಭಾಗದ ಹಾಡ್ಲಿ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಅನಿಲ್ ಡಿ.ಹಲಸಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ವಿದ್ಯುತ್ ಕಂಬ ಬದಲಾಯಿಸುವ ಕೆಲಸದದಲ್ಲಿ ನಿರತನಾಗಿದ್ದಾಗ ಆಯತಪ್ಪಿ ಕಂಬದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಡಿಕ್ಕಿ: ಸೈಕಲ್ ಸವಾರ ಸಾವು
ಮಳವಳ್ಳಿ: ಲಾರಿ ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ದಂಡಿನ ಮಾರಮ್ಮನ ದೇವಸ್ಥಾನ ಬಳಿ ಭಾನುವಾರ ಸಂಜೆ ನಡೆದಿದೆ. ಪಟ್ಟಣದ ಗಂಗಾಮತ ಬೀದಿಯ ಕೃಷ್ಣ (38) ಮೃತಪಟ್ಟವರು.
ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಸಂಬಂಧಿಕರೊಬ್ಬರ ಪೂಜಾ ಕಾರ್ಯಕ್ರಮದಲ್ಲಿ ಕೃಷ್ಣ ಊಟ ಮುಗಿಸಿಕೊಂಡು ಮನೆಗೆ ತೆರಳಲು ತಮ್ಮಡಹಳ್ಳಿ ರಸ್ತೆಯಿಂದ ಮಳವಳ್ಳಿ-ಮದ್ದೂರು ರಸ್ತೆಗೆ ಸೈಕಲ್‌ನಲ್ಲಿ ತಿರುವು ಪಡೆಯುತ್ತಿದ್ದ ವೇಳೆ ಮದ್ದೂರು ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.