ಸಮಸ್ಯೆ ಹೇಳಿದ ವ್ಯಕ್ತಿಗೆ ಮುಖ್ಯಾಧಿಕಾರಿ ನಿಂದನೆ: ವಿಡಿಯೋ ವೈರಲ್
KannadaprabhaNewsNetwork | Published : Oct 06 2023, 01:18 AM IST
ಸಮಸ್ಯೆ ಹೇಳಿದ ವ್ಯಕ್ತಿಗೆ ಮುಖ್ಯಾಧಿಕಾರಿ ನಿಂದನೆ: ವಿಡಿಯೋ ವೈರಲ್
ಸಾರಾಂಶ
ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಕೇಳಿದ ವ್ಯಕ್ತಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಂದಿಸಿದ ಘಟನೆ ಸಮೀಪದ ಕುಡತಿನಿ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಕುರುಗೋಡು ಸಾರ್ವಜನಿಕರ ಸಮಸ್ಯೆ ಪರಿಹರಿಸುವಂತೆ ಕೇಳಿದ ವ್ಯಕ್ತಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಂದಿಸಿದ ಘಟನೆ ಸಮೀಪದ ಕುಡತಿನಿ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಕುಡುತಿನಿ ಪಟ್ಟಣದಲ್ಲಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಚರಂಡಿ ವೀಕ್ಷಣೆಗೆ ತೆರಳಿದ್ದರು. ಆಗ ಅಲ್ಲಿನ ನಿವಾಸಿ ಗೌರಿಶಂಕರ್ ಎಂಬವರು, ಇಲ್ಲಿನ ಚರಂಡಿ ಘನತ್ಯಾಜ್ಯದಿಂದ ತುಂಬಿದ್ದು, ಚರಂಡಿ ಸ್ವಚ್ಛಗೊಳಿಸುವುದಕ್ಕೆ ಇನ್ನೆಷ್ಟು ದಿನ ಬೇಕು ಎಂದು ಮುಖ್ಯಾಧಿಕಾರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಇನ್ನೂ ಒಂದು ತಿಂಗಳಾಗಲಿ, ಸ್ವಚ್ಛ ಮಾಡಿಸುವುದಿಲ್ಲ ಎಂದು ಏಕವಚನದಲ್ಲೇ ಅಸಭ್ಯವಾಗಿ ವರ್ತಿಸಿದ್ದಾರೆ. ಸಾರ್ವಜನಿಕರಿಗೆ ಅಭಿವೃದ್ಧಿ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿ ಜಗಳಕ್ಕೆ ಇಳಿದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಈ ಬಗ್ಗೆ ಮೇಲಧಿಕಾರಿಗಳು ಪರಿಶೀಲಿಸಿ ಮುಖ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನೆ ಕುರಿತು ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ವ್ಯಕ್ತಿಯೊಬ್ಬರಿಗೆ ನಿಂದಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ.