ರೈಲಿನಲ್ಲಿ ಬಂದು ಮನೆಗಳಲ್ಲಿ ಕದ್ದು ಐಷಾರಾಮಿ ಬಸ್ಸಲ್ಲಿ ಉತ್ತರ ಪ್ರದೇಶಕ್ಕೆ ಪರಾರಿ : ಸೆರೆ

| N/A | Published : Mar 01 2025, 02:03 AM IST / Updated: Mar 01 2025, 05:06 AM IST

ಸಾರಾಂಶ

ರೈಲಿನಲ್ಲಿ ನಗರಕ್ಕೆ ಬಂದು ಮನೆಗಳವು ಮಾಡಿ ಐಷಾರಾಮಿ ಬಸ್‌ನಲ್ಲಿ ಉತ್ತರ ಪ್ರದೇಶಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಕಳ್ಳರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ರೈಲಿನಲ್ಲಿ ನಗರಕ್ಕೆ ಬಂದು ಮನೆಗಳವು ಮಾಡಿ ಐಷಾರಾಮಿ ಬಸ್‌ನಲ್ಲಿ ಉತ್ತರ ಪ್ರದೇಶಕ್ಕೆ ಪರಾರಿಯಾಗುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಕಳ್ಳರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ತಂಜೀಮ್‌ ಅಲಿ ಅಲಿಯಾಸ್‌ ಚಂದು (29) ಮತ್ತು ಸದ್ದಾಂ ಅಲಿಯಾಸ್‌ ಹನೀಫ್‌ (30) ಬಂಧಿತರು. ಆರೋಪಿಗಳಿಂದ ₹20.64 ಲಕ್ಷ ಮೌಲ್ಯದ 18 ಗ್ರಾಂ ಚಿನ್ನಾಭರಣ, ₹15 ಸಾವಿರ ನಗದು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಕಳೆದ ಡಿಸೆಂಬರ್‌ 13ರಂದು ಜಯನಗರ 4ನೇ ಬ್ಲಾಕ್‌ನ ನಿವಾಸಿಯೊಬ್ಬರು ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳಿದ್ದರು. ಡಿ.15ರಂದು ರಾತ್ರಿ ವಾಪಾಸ್‌ ಮನೆಗೆ ಬಂದಾಗ ದುಷ್ಕರ್ಮಿಗಳು ಮನೆಯ ಬಾಗಿಲ ಬೀಗ ಮುರಿದು ರೂಮ್‌ನ ಬೀರುವಿನಲ್ಲಿದ್ದ 700 ಗ್ರಾಂ ಚಿನ್ನಾಭರಣ ಹಾಗೂ ₹3.80 ಲಕ್ಷ ನಗದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದ್ದ ಬೈಕ್‌ನಲ್ಲಿ ಮನೆಗಳವು:

ಆರೋಪಿಗಳು ಉತ್ತರ ಪ್ರದೇಶದಿಂದ ರೈಲಿನಲ್ಲಿ ನಗರಕ್ಕೆ ಬಂದು ನಗರದ ಹೊರವಲಯಗಳಲ್ಲಿ ಬಾಡಿಗೆಗೆ ರೂಮ್‌ ಪಡೆದು ನೆಲೆಸುತ್ತಿದ್ದರು. ಬಳಿಕ ದ್ವಿಚಕ್ರ ವಾಹನ ಕದ್ದು, ಅದೇ ವಾಹನಗಳಲ್ಲಿ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳಲ್ಲಿ ಕಳವು ಮಾಡುತ್ತಿದ್ದರು. ಕದ್ದ ಮಾಲುಗಳೊಂದಿಗೆ ಐಷಾರಾಮಿ ಬಸ್‌ಗಳಲ್ಲಿ ಉತ್ತರ ಪ್ರದೇಶಕ್ಕೆ ಪರಾರಿಯಾಗುತ್ತಿದ್ದರು.

ಪ್ರಕರಣದ ತನಿಖೆ ವೇಳೆ ಪೊಲೀಸರು ಘಟನಾ ಸ್ಥಳ ಸೇರಿದಂತೆ ನಗರದ ಸುಮಾರು ಮೂರು ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದರು. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ಉತ್ತರಪ್ರದೇಶದ ಹಾಪೂರ್ ಹಾಗೂ ಮೀರತ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಕಳವು:

ಆರೋಪಿ ತಂಜಿಮ್‌ ಆಲಿ ವಿರುದ್ಧ ಉತ್ತರಪ್ರದೇಶ, ರಾಜಸ್ಥಾನ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಸದ್ದಾಂ, ತಂಜಿಮ್‌ ಕೃತ್ಯಗಳಿಗೆ ಸಾಥ್‌ ನೀಡಿದ್ದ. ಕಳವು ಕೃತ್ಯಗಳ ಬಳಿಕ ಆರೋಪಿಗಳು ಬಂಧನದ ಭೀತಿಯಲ್ಲಿ ಹೈದರಾಬಾದ್- ಇಂದೋರ್ ಮೂಲಕ ಐಷಾರಾಮಿ ಬಸ್‌ಗಳಲ್ಲಿ ಉತ್ತರಪ್ರದೇಶಕ್ಕೆ ಪರಾರಿಯಾಗುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಸ್ಥಳೀಯ ಜುವೆಲ್ಲರಿ ಅಂಗಡಿಗಳಲ್ಲಿ ಗಿರವಿ ಹಾಗೂ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ತಿಲಕನಗರ ಠಾಣೆಯ ಒಂದು ಮನೆಗಳವು ಪ್ರಕರಣ ಮತ್ತು ಗೋವಿಂದರಾಜನಗರ ಠಾಣೆಯ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.