ಸಾರಾಂಶ
ಬೆಂಗಳೂರು : ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ಐಶ್ವರ್ಯಾ ಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಲವರಿಂದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಈ ಸಂಬಂಧ ವಂಚನೆ ಮಾಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ ಮತ್ತು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇಂತಹ ಅನ್ಯಾಯಗಳು ಆಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ವಾರಾಹಿ ವಲ್ಡ್ ಗೋಲ್ಡ್ ಚಿನ್ನದಂಗಡಿ ಮಾಲಕಿ ವನಿತಾ ಐತಾಳ್ ಅವರು ಐಶ್ವರ್ಯಾ ಗೌಡ, ಆಕೆಯ ಪತಿ ಹರಿಶ್ ಮತ್ತು ನಟ ಧರ್ಮೇಂದ್ರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾನು ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ನಂಬಿಸಿ ಸ್ನೇಹ ಸಂಪಾದಿಸಿದ್ದ ಐಶ್ವರ್ಯಾ ಗೌಡ ಬಳಿಕ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ಸಾಲ ಪಡೆದು ವಂಚಿಸಿದ್ದಾರೆ. ಡಿ.ಕೆ.ಸುರೇಶ್ ಹೆಸರಿನಲ್ಲಿ ನಟ ಧರ್ಮೇಂದ್ರನಿಂದ ಕರೆ ಮಾಡಿಸಿದ್ದು, ಜೀವ ಬೆದರಿಕೆ ಸಹ ಹಾಕಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಐಶ್ವರ್ಯಾ ಗೌಡ ದಂಪತಿಯನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಧರ್ಮೇಂದ್ರನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ.