ಸಾರಿಗೆ ಅಧಿಕಾರಿಯ ಹೆಸರಲ್ಲಿ ನಕಲಿ ಪತ್ರ ಸೃಷ್ಟಿಸಿ ಗೊಂದಲ; ಅಧೀನ ಕಾರ್ಯದರ್ಶಿ ಹೆಸರಲ್ಲಿ ಕೃತ್ಯ

| Published : Feb 16 2024, 01:51 AM IST

ಸಾರಾಂಶ

ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಡಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಡಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ವಿ.ಎಸ್‌.ಪುಷ್ಟಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ದೂರುದಾರರಾದ ವಿ.ಎಸ್‌.ಪುಷ್ಪಾ ಅವರು, ಸರ್ಕಾರದಿಂದ ಹೊರಡಿಸಲಾಗುವ ಯಾವುದೇ ಪತ್ರ ಮತ್ತು ಆದೇಶಗಳಿಗೆ ಸಂಬಂಧಿಸಿದಂತೆ ಅಧೀನ ಕಾರ್ಯದರ್ಶಿ ಅವರ ಹೆಸರಿನ ಸಹಿತ ಸಹಿ ಮಾಡಬೇಕಾಗುತ್ತದೆ. ಹೀಗಿರುವಾಗ ದುಷ್ಕರ್ಮಿಗಳು ನನ್ನ ಹೆಸರು ಮತ್ತು ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿದ್ದಾರೆ. ‘ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿರುವಂತೆ ನಕಲಿ ಪತ್ರವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ನಕಲಿ ಪತ್ರದಿಂದ ಇಲಾಖೆ ಮತ್ತು ಸಾರಿಗೆ ನಿಗಮಗಳ ಆಡಳಿತದಲ್ಲಿ ಗೊಂದಲ ಉಂಟಾಗಿದೆ. ಈ ರೀತಿ ಸರ್ಕಾರದ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸುವುದು ಸರ್ಕಾರದ ಆಡಳಿತದ ಮೇಲೆ ವ್ಯತಿರಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಈ ನಕಲಿ ಪತ್ರ ಸೃಷ್ಟಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.