ಸಾರಾಂಶ
ಬೆಂಗಳೂರು : ಪಾಸ್‌ಪೋರ್ಟ್ ಪಡೆಯಲು ಸಲ್ಲಿಸಿದ್ದ ಅರ್ಜಿ ಸಂಬಂಧ ವಾಸಸ್ಥಳ ಹಾಗೂ ದಾಖಲೆಗಳ ಪರಿಶೀಲನೆಗೆ ತೆರಳಿದ್ದ ಬ್ಯಾಟರಾಯನಪುರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್, ಅರ್ಜಿದಾರ ಯುವತಿ ಜತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಕಿರಣ್ ಅಮಾನತುಗೊಂಡ ಪೊಲೀಸ್ ಕಾನ್ಸ್‌ಟೇಬಲ್. 21 ವರ್ಷದ ಯುವತಿ ಮಾಡಿದ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ತಿಳಿದು ಬಂದಿರುವುದರಿಂದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಕಾನ್ಸ್‌ಟೇಬಲ್ ಕಿರಣ್‌ನನ್ನು ಸೇವೆಯಿಂದ ಅಮಾನುತು ಗೊಳಿಸಿದ್ದಾರೆ.
ಘಟನೆ ವಿವರ: ಬಾಪೂಜಿನಗರದ ಯುವತಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಯುವತಿಯ ವಾಸಸ್ಥಳ ಹಾಗೂ ದಾಖಲೆಗಳ ಪರಿಶೀಲನೆಗೆ ಕಾನ್ಸ್‌ಟೇಬಲ್ ಕಿರಣ್ ತೆರಳಿದ್ದಾರೆ. ಈ ವೇಳೆ ಏಕಾಏಕಿ ಮನೆ ಪ್ರವೇಶಿಸಿ, ಬಾಗಿಲನ್ನು ಅರ್ಧ ಮುಚ್ಚಿದ್ದಾರೆ. ಬಳಿಕ ಪಾಸ್‌ಪೋರ್ಟ್ ಸಂಬಂಧ ಪರಿಶೀಲನೆಗೆ ಬಂದಿದ್ದೇನೆ. ನಿಮ್ಮ ಸಹೋದರ ಕ್ರಿಮಿನಲ್ ಹಿನ್ನೆಲೆಯುವುಳ್ಳವನಾಗಿದ್ದು, ನಿಮಗೆ ಪಾಸ್‌ಪೋರ್ಟ್ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.
ನೀವು ನನ್ನೊಂದಿಗೆ ಸಹಕರಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಬಾಗಿಲು ಹಾಕುವಂತೆ ಯುವತಿಗೆ ಸೂಚಿಸಿದ್ದಾರೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಬಳಿಕ ಕಿರಣ್ ತಾನೇ ಬಾಗಿಲು ಮುಚ್ಚಿ, ಒಮ್ಮೆ ಅಪ್ಪಿಕೊಳ್ಳುತ್ತೇನೆ. ಇದನ್ನು ಯಾರಿಗೂ ಹೇಳಬೇಡಿ ಎಂದು ಬಲವಂತ ಮಾಡಿದ್ದಾರೆ ಎಂದು ಯುವತಿ ಡಿಸಿಪಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವೇಳೆ ಯುವತಿ ಸಹೋದರ ಮನೆಯ ಬೇರೊಂದು ಕೊಠಡಿಯಲ್ಲಿದ್ದರು. ಇದನ್ನು ಗಮನಿಸಿದ ಕಾನ್ಸ್‌ಟೇಬಲ್ ಕಿರಣ್, ತಕ್ಷಣ ತನ್ನ ಮಾತು ಬದಲಿಸಿದ್ದಾರೆ. ನೀನು ನನ್ನ ಸಹೋದರಿ ಇದ್ದಂತೆ ಎಂದು ಏಕಾಏಕಿ ಮನೆಯಿಂದ ಪರಾರಿಯಾಗಿದ್ದಾರೆ. ಬಳಿಕ ಯಾವುದೇ ದಾಖಲೆ ಪರಿಶೀಲಿಸದೆ ಯುವತಿ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಕಾನ್ಸ್‌ಟೇಬಲ್ ಕಿರಣ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.