ಕೇರಳ ಪ್ರೊಫೆಸರ್‌ ಕೈ ಕತ್ತರಿಸಿದ್ದಕೇಸಿನ ಪ್ರಮುಖ ಆರೋಪಿ ಸೆರೆ!

| Published : Jan 11 2024, 01:31 AM IST

ಕೇರಳ ಪ್ರೊಫೆಸರ್‌ ಕೈ ಕತ್ತರಿಸಿದ್ದಕೇಸಿನ ಪ್ರಮುಖ ಆರೋಪಿ ಸೆರೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳ ಪ್ರೊಫೆಸರ್‌ವೊಬ್ಬರನ್ನು ಪ್ರಶ್ನೆಪತ್ರಿಕೆಯಲ್ಲಿ ಆಕ್ಷೇಪಾರ್ಹ ಪ್ರಶ್ನೆ ಕೇಳಿದ ಹಿನ್ನೆಲೆ ಕೈ ಕತ್ತರಿಸಿದ ಘಟನೆ ನಡೆದ 13 ವರ್ಷಗಳ ಬಳಿಕ ಆರೋಪಿ ವಿದ್ಯಾರ್ಥಿಯನ್ನು ಬಂಧನ ಮಾಡಲಾಗಿದೆ.

ನವದೆಹಲಿ: ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪ್ರೊಫೆಸರ್‌ ಕೈಯನ್ನೇ ಕತ್ತರಿಸಿದ್ದ 2010ರ ಕೇರಳದ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸವಾದ್‌ನನ್ನು ಕೇರಳದ ಕಣ್ಣೂರಿನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸವಾದ್‌ನನ್ನು ಹುಡುಕಿಕೊಟ್ಟರೆ 10 ಲಕ್ಷ ರು. ಬಹುಮಾನವನ್ನೂ ಈ ಹಿಂದೆ ಘೋಷಿಸಲಾಗಿತ್ತು.

ಏನಿದು ಪ್ರಕರಣ?ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದ್‌ರಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ನಿಷೇಧಿತ ಪಿಎಫ್‌ಐ ಮತ್ತು ಎಸ್‌ಡಿಪಿಐನ ಕೆಲ ಕಾರ್ಯಕರ್ತರು ಭಾನುವಾರದ ಪ್ರಾರ್ಥನೆ ಮುಗಿಸಿ ಚರ್ಚ್‌ನಿಂದ ಮರಳುತ್ತಿದ್ದ ಪ್ರೊಫೆಸರ್‌ ಟಿ.ಜೆ ಜೋಸೆಫ್‌ ಅವರ ಅಂಗೈಯನ್ನೇ ಕತ್ತರಿಸಿದ್ದರು. ಅಲ್ಲದೇ ಅವರ ಹತ್ಯೆಗೂ ಪ್ರಯತ್ನಿಸಿದ್ದರು. ಈ ಘಟನೆಗೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಮೂವರಿಗೆ ಜೀವಾವಧಿ, ಮತ್ತು 8 ಜನರಿಗೆ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಸವಾದ್ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು.ಈ ನಡುವೆ ಸವಾದ್‌ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಪ್ರೊಫೆಸರ್‌ ಜೋಸೆಫ್‌, ಇದು ಪೊಲೀಸರ ಪಾಲಿಗೆ ಮಹತ್ವದ ಬೆಳವಣಿಗೆ ಆಗಿರಬಹುದು. ಆದರೆ ನನಗಲ್ಲ. ಕಾರಣ, ನನ್ನ ದಾಳಿಯ ಹಿಂದಿನ ಸೂತ್ರಧಾರಿಗಳು ಇನ್ನೂ ಅಡಗಿಕೊಂಡಿದ್ದಾರೆ. ಅವರ ಕಡೆಗೆ ತನಿಖೆ ತಲುಪಿಯೇ ಇಲ್ಲ. ನಮ್ಮ ಕಾನೂನು ವ್ಯವಸ್ಥೆ ಆ ಮಟ್ಟಿಗೆ ಬೆಳವಣಿಗೆ ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.