ಸಾರಾಂಶ
ಬೆಂಗಳೂರು : ಇತ್ತೀಚಿಗೆ ಯಲಹಂಕ ಉಪನಗರ ಸಮೀಪ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಅವಳಿ ಕೊಲೆ ಮಾಡಿದ ಇಬ್ಬರು ಆರೋಪಿಗಳು ತಮ್ಮ ದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಾಗ ತಾಂತ್ರಿಕ ಮಾಹಿತಿ ಆಧರಿಸಿ ಯಲಹಂಕ ಉಪ ನಗರ ಪೊಲೀಸರು ಸೆರೆ ಹಿಡಿದಿದ್ದಾರೆ.
ನೇಪಾಳ ಮೂಲದ ಸಂಗಂ ಬಿಸ್ವಕರ್ಮ ಹಾಗೂ ಸಮೀರ್ ಬಿಸ್ವಕರ್ಮ ಬಂಧಿತರು. ಈ ಇಬ್ಬರು ಕಳೆದ ಭಾನುವಾರ ಯಲಹಂಕ ಉಪನಗರದ 4ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿ ಸೆಕ್ಯೂರಿಟಿ ಗಾರ್ಡ್ ನೇಪಾಳ ಮೂಲದ ಬಿಕ್ರಂ (21) ಹಾಗೂ ಬಿಹಾರ ರಾಜ್ಯದ ವಾಹನ ಚಾಲಕ ಚೋಟು ತೂರಿ (34) ಮೇಲೆ ಹಲ್ಲೆ ನಡೆಸಿ ಆರೋಪಿಗಳು ಹತ್ಯೆಗೈದಿದ್ದರು.
ಹಲವು ದಿನಗಳ ಹಿಂದೆ ಕೆಲಸ ಅರಸಿಕೊಂಡು ನೇಪಾಳ ಮೂಲದ ಬಿಕ್ರಂ ಬಿಸ್ವಕರ್ಮ, ಸಂಗಂ ಹಾಗೂ ಸಮೀರ್ ವಲಸೆ ಬಂದಿದ್ದರು. ಬಳಿಕ ಪುಟ್ಟೇನಹಳ್ಳಿ ಹತ್ತಿರದ ಹೋಟೆಲ್‌ನಲ್ಲಿ ಎಲ್ಲರು ಕೆಲಸಕ್ಕೆ ಸೇರಿದ್ದರು. ಆನಂತರ ಯಲಹಂಕ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಗೆ ಕಾವಲುಗಾರನಾಗಿ ಬಿಕ್ರಂ ಸೇರಿದ್ದ. ನಗರದಲ್ಲಿ ನೆಲೆಸಿರುವ ನೇಪಾಳ ಮೂಲದ ಯುವತಿ ಜತೆ ಸಂಗಂಗೆ ಪ್ರೇಮವಾಗಿತ್ತು. ಆದರೆ ಆ ಯುವತಿ ಜತೆ ಬಿಕ್ರಂ ಕೂಡ ಸ್ನೇಹ ಇತ್ತು. ಈ ಸಂಗತಿ ತಿಳಿದ ಸಂಗಂ, ತನ್ನ ಪ್ರಿಯತಮೆ ಜತೆ ಸ್ನೇಹ ಕಡಿದುಕೊಳ್ಳುವಂತೆ ಬಿಕ್ರಂಗೆ ತಾಕೀತು ಮಾಡಿದ್ದ. ಆದರೆ ಸ್ನೇಹವನ್ನು ಬ್ರಿಕಂ ಮುಂದುವರೆಸಿದ್ದ. ಈ ಗೆಳೆತನದಲ್ಲಿ ಆಗಾಗ್ಗೆ ಆಕೆಗೆ ವಿಡಿಯೋ ಕಾಲ್ ಮಾಡಿ ಬಿಕ್ರಂ ಮಾತುಕತೆ ನಡೆಸುತ್ತಿದ್ದ. ಇದರಿಂದ ಕೆರಳಿದ ಸಂಗಂ, ಗೆಳೆಯನ ಹತ್ಯೆಗೆ ನಿರ್ಧರಿಸಿದ್ದ.
ಅಂತೆಯೇ ಬಿಕ್ರಂ ಕೆಲಸ ಮಾಡುತ್ತಿದ್ದ ಕೈಗಾರಿಕೆ ಬಳಿಗೆ ಭಾನುವಾರ ರಾತ್ರಿ ಸಂಗಂ ಹಾಗೂ ಸಮೀರ್ ತೆರಳಿದ್ದರು. ಆ ವೇಳೆ ಗೆಳೆಯ ತೂರಿ ಜತೆ ಮದ್ಯ ಸೇವನೆಯಲ್ಲಿ ತೊಡಗಿದ್ದ ಬಿಕ್ರಂ ಮೇಲೆ ಏಕಾಏಕಿ ಆರೋಪಿಗಳು ಗಲಾಟೆ ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಗೆಳೆಯನ ರಕ್ಷಣೆಗೆ ಧಾವಿಸಿದ ತೂರಿ ಮೇಲೂ ಆರೋಪಿಗಳು ಪ್ರತಾಪ ತೋರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊನೆಗೆ ಬಿಕ್ರಂ ಹಾಗೂ ತೂರಿ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಘಟನೆಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿ ಇಬ್ಬರು ಕೊನೆಯುಸಿರೆಳೆದರು. ಈ ಪ್ರಕರಣದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.