ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮದ್ದೂರಿನ ನ್ಯಾಯಾಲಯ ಆದೇಶಿಸಿದೆ.
ಮದ್ದೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಚೋದನಕಾರಿ ಸಂದೇಶವುಳ್ಳ ವಿಡಿಯೋ ಹಾಕಿರುವ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.
ಮದ್ದೂರು ತಾಲೂಕು ವೈದ್ಯನಾಥಪುರ ಗ್ರಾಮದ ಸಿದ್ದಪ್ಪಾಜಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಪೊಲೀಸರಿಗೆ ಆದೇಶ ನೀಡಿದ್ದಾರೆ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಬಿಎನ್‌ಎಸ್ ೩೫೨ರನ್ವಯ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಆರೋಪಿ ಸಿದ್ದಪ್ಪಾಜಿ ಕಳೆದ ಆ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ವಾಟ್ಸಾಪ್ ಗ್ರೂಪ್‌ನಲ್ಲಿ ಹರಿಯಬಿಟ್ಟಿದ್ದರು. ಅಲ್ಲದೇ, ಪ್ರತಿದಿನ ಗ್ರೂಪಿನಲ್ಲಿ ಪ್ರಚೋದನಕಾರಿ ಸಂದೇಶ ಮತ್ತು ವಿಡಿಯೋಗಳನ್ನು ಪದೇಪದೇ ಹರಿಯಬಿಡುತ್ತಿದ್ದರು. ಇದನ್ನು ತೀವ್ರವಾಗಿ ವಿರೋಧಿಸಿದ ವೈದ್ಯನಾಥಪುರ ಗ್ರಾಮದ ವಿ.ಎಂ.ರಾಮಣ್ಣ ಪುತ್ರ ಪಿ.ಆರ್.ಗೋವಿಂದರಾಜು ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ನಂತರ ದೂರು ಸ್ವೀಕರಿಸಿದ ಪೊಲೀಸರು ಇದು ಕೇವಲ ಲಘು ಪ್ರಕರಣ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದರು. ಪೊಲೀಸರ ಈ ಕ್ರಮ ಪ್ರಶ್ನಿಸಿ ಪಿ.ಆರ್.ಗೋವಿಂದರಾಜು ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ವಿ.ಕೋನಪ್ಪ ಆರೋಪಿ ಸಿದ್ದಪ್ಪಾಜಿ ವಿರುದ್ಧ ಬಿಎನ್‌ಎಸ್‌ಕಾಯ್ದೆ ಅನ್ವಯ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿದ ಅನ್ವಯ ಆ. 28 ರಂದು ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.