ಬೆಂಗಳೂರು : ಒಂದೇ ಮನೆಯನ್ನೇ ಖಾಲಿ ಇದೆ ಎಂದು 12 ಜನಕ್ಕೆ ಬಾಡಿಗೆ ನೀಡಿ 1 ಕೋಟಿ ರು. ವಂಚನೆ

| Published : Dec 20 2024, 12:48 AM IST / Updated: Dec 20 2024, 04:12 AM IST

ಸಾರಾಂಶ

ಬಾಡಿಗೆ ಕೊಟ್ಟಿದ್ದ ಮನೆಯನ್ನೇ ಖಾಲಿ ಇದೆ ಎಂದು ಹೇಳಿ ಭೋಗ್ಯಕ್ಕೆ ಕೊಡುವುದಾಗಿ ನಂಬಿಸಿ ಜನರಿಂದ ₹1.09 ಕೋಟಿ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಬಾಡಿಗೆ ಕೊಟ್ಟಿದ್ದ ಮನೆಯನ್ನೇ ಖಾಲಿ ಇದೆ ಎಂದು ಹೇಳಿ ಭೋಗ್ಯಕ್ಕೆ ಕೊಡುವುದಾಗಿ ನಂಬಿಸಿ ಜನರಿಂದ ₹1.09 ಕೋಟಿ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೋಳ ನಗರದ ಗಿರೀಶ್ ಬಂಧಿತನಾಗಿದ್ದು, ಆತನಿಂದ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಬಗ್ಗೆ ಖಾಸಗಿ ಕಂಪನಿ ಉದ್ಯೋಗಿಗಳಾದ ಮಹೇಂದ್ರ, ರಮ್ಯ ಹಾಗೂ ಕೀರ್ತಿ ಕುಮಾರ್‌ರವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಮನೆ ಭೋಗ್ಯ ನೀಡುವ ನೆಪದಲ್ಲಿ ವಂಚಿಸಿರುವ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್‌ಗಳು ದಾಖಲಾಗಿದ್ದವು. ನೋ ಬ್ರೋಕರ್ ಆ್ಯಪ್‌ನಲ್ಲಿ ತಮ್ಮ ಮನೆ ಭೋಗ್ಯಕ್ಕಿಡಲಾಗಿದೆ ಎಂದು ವಿವರವನ್ನು ಆರೋಪಿ ಪ್ರಕಟಿಸಿದ್ದ. ಈ ವಿವರ ನೋಡಿ ತನ್ನನ್ನು ಸಂಪರ್ಕಿಸುವ ಜನರಿಗೆ ಮನೆ ಖಾಲಿ ಇದೆ ಎಂದು ನಂಬಿಸಿ

ಚೋಳದ ನಗರದಲ್ಲಿ 2 ಅಂತಸ್ತಿನ ಮನೆ ಕಟ್ಟಡವಿದ್ದು, ಕೆಳ ಹಂತದಲ್ಲಿ ಗಿರೀಶ್ ಕುಟುಂಬ ನೆಲೆಸಿದೆ. ಇನ್ನುಳಿದ 2 ಹಂತದ ಮನೆಗಳನ್ನು ಆತ ಬಾಡಿಗೆ ಕೊಟ್ಟಿದ್ದಾನೆ. ಹೀಗಿದ್ದರು ಮನೆ ಖಾಲಿ ಇದೆ ಎಂದು ಹೇಳಿ ಜನರಿಗೆ ಆತ ವಂಚಿಸುತ್ತಿದ್ದ. ಪ್ರತಿಯೊಬ್ಬರಿಗೆ ಒಂದೊಂದು ಕಾರಣ ಕೊಟ್ಟು ಆರೋಪಿ ಹಣ ಪಡೆದಿದ್ದ ಎಂದು ಡಿಸಿಪಿ ಹೇಳಿದ್ದಾರೆ.

12 ಜನರಿಂದ ₹1.09 ಕೋಟಿ ವಸೂಲಿ

ಕಳೆದೊಂದು ವರ್ಷದ ಅವಧಿಯಲ್ಲಿ ಮನೆ ಭೋಗ್ಯದ ಹೆಸರಿನಲ್ಲಿ ಸುಮಾರು 12 ಜನರಿಂದ ₹1.09 ಕೋಟಿ ಹಣವನ್ನು ಗಿರೀಶ್ ವಸೂಲಿ ಮಾಡಿದ್ದ. ಈ ಹಣದ ಪೈಕಿ ₹55 ಲಕ್ಷ ಹಣವನ್ನು ಆತ ಮರಳಿಸಿದ್ದು, ಬಾಕಿ ₹54 ಲಕ್ಷ ಬಾಕಿ ಇದೆ. ಒಬ್ಬೊಬ್ಬರಿಂದ 8 ರಿಂದ ₹10 ಲಕ್ಷವರೆಗೆ ಆತ ವಸೂಲಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಆತ, ಬಳಿಕ ಅಲ್ಲಿ ಕೆಲಸ ತೊರೆದು ಕ್ಯಾಟರಿಂಗ್‌ ಸರ್ವೀಸ್ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಆನಂತರ ಸುಲಭವಾಗಿ ಹಣ ಸಂಪಾದನೆಗೆ ಆತ ವಂಚನೆ ಕೃತ್ಯಕ್ಕಿಳಿದ್ದ. ಈಗಾಗಲೇ ಒಂದು ವಂಚನೆ ಪ್ರಕರಣದಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಪಡೆದು ಹೊರಬಂದ ನಂತರ ಮತ್ತೆ ತನ್ನ ಚಾಳಿಯನ್ನು ಗಿರೀಶ್ ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.