ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರುಪಾಯಿ ಅನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜರುಗಿದೆ.ತಾಲೂಕಿನ ಕೊಪ್ಪ ಹೋಬಳಿ ರಾಂಪುರ ಗ್ರಾಮದ ರೈತ ಚಂದ್ರಶೇಖರ್ ಅವರ ಸೇವಿಂಗ್ಸ್ ಖಾತೆಯಲ್ಲಿದ್ದ 1,60,79,890 ರು. ಗಳನ್ನು ಗ್ರಾಹಕರ ಗಮನಕ್ಕೆ ಬಾರದೇ ಯುಪಿಐ ಸಂಪರ್ಕ ಸಾಧಿಸಿ ವಂಚಕರು ಪಂಗನಾಮ ಹಾಕಿದ್ದಾರೆ. ಈ ಪ್ರಕರಣ ಕುರಿತು ಚಂದ್ರಶೇಖರ್ ಮಂಡ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ ಚಂದ್ರಶೇಖರ್ ಮದ್ದೂರಿನ ಟಿಎಪಿಸಿಎಂಎಸ್ ಕಟ್ಟಡದಲ್ಲಿದ್ದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಆ ನಂತರ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ ವಿಲೀನಗೊಂಡ ಬಳಿಕ ಖಾತೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಈ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದ್ರಶೇಖರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಆನ್‌ಲೈನ್ ವಂಚಕರು ಯುಪಿಐ ಕೋಡ್ ಬಳಸಿ ಕಳೆದ ಜುಲೈ 24ರಂದು ಅವರ ಖಾತೆಯಲ್ಲಿದ್ದ 1 ಕೋಟಿ 10 ಲಕ್ಷ, ಆ ನಂತರ ಜುಲೈ 27 ರಂದು 49, 99,299.99 ಲಕ್ಷ ಸೇರಿದಂತೆ 1.60 ಲಕ್ಷ ದ 798 ರು.ಗಳನ್ನು ಯುಪಿಐ ಕೋಡ್ ಬಳಸಿ ಆನ್ ಲೈನ್ ಮೂಲಕ ಹಂತ ಹಂತವಾಗಿ ಲಪಟಾಯಿಸಲಾಗಿದೆ ಎಂದು ರೈತ ಚಂದ್ರಶೇಖರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಮಂಡ್ಯ ಸೈಬರ್ ಕ್ರೈಂ ಕಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಮತ್ತು ಬಿಎನ್‌ಎಸ್ ಕಾಯ್ದೆ 2023 ರನ್ವಯ 318 ಹಾಗೂ 319 ರೀತ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.ದಿನಸಿ ಅಂಗಡಿಗಳಲ್ಲಿ ಕಳ್ಳತನ
ಪಾಂಡವಪುರ: ಪಟ್ಟಣದ ಎರಡು ಅಂಗಡಿಯಲ್ಲಿ ಕಳ್ಳರು ನಗದು, ಆಹಾರ ಪದಾರ್ಥಗಳನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.ಪಟ್ಟಣದ ಹೆಗ್ಗಡಹಳ್ಳಿ ರಾಮಕೃಷ್ಣೇಗೌಡರಿಗೆ ಸೇರಿದ ಜನತಾಭಂಡಾರ ದಿನಸಿ ಅಂಗಡಿಯಲ್ಲಿ ಬೀಗ ಮುರಿದು ಒಳನುಗ್ಗಿರುವ ಕಳ್ಳರು 9 ಸಾವಿರ ನಗದು, ಸನ್ ಪ್ಯೂರ್ ಎಣ್ಣೆ 15 ಬಾಕ್ಸ್, 5 ಲೀಟರ್ 13 ಕ್ಯಾನ್, ರುಚಿಗೋಲ್ಡ್ 8 ಬಾಕ್ಸ್, ಬಾದಾಮಿ ಸೇರಿದಂತೆ ಇತರೆ ಪದಾರ್ಥಗಳನ್ನು ಕದ್ದಿದ್ದಾರೆ.
ನಂತರ ಸೋಮಶೇಖರ್ ಅವರಿಗೆ ಸೇರಿದ ರಾಜ ರಾಜೇಶ್ವರಿ ಎಂಟರ್ ಪ್ರೈಸಸ್ ದಿನಸಿ ಅಂಗಡಿಯಲ್ಲಿ ಸನ್ ಪ್ಯೂರ್ ಎಣ್ಣೆ ಬಾಕ್ಸ್ 15, ಎಣ್ಣೆ ಟಿನ್ 1, 5 ಲೀಟರ್ ಕ್ಯಾನ್ ಮೂರು, 4-5ಸಾವಿರ ನಗದು, ಮೊಬೈಲ್ ಚಾರ್ಜರ್ 2, ದಿನನಿತ್ಯ ಬಳಸುವ ಪದಾರ್ಥಗಳನ್ನು ಕಳವು ಮಾಡಿದ್ದಾರೆ. ಬೊಲೇರೋ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರ ಚಲನವಲನಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 2022ರ ಸೆ.7ರಂದು ಇದೇ ಅಂಗಡಿಯಲ್ಲಿ ಕಳ್ಳತನ ನಡೆದಿದ್ದನ್ನು ಸ್ಮರಿಸಬಹುದು.ಬೆಳಗಿನ ಜಾವಾ 3 ಗಂಟೆ 50 ನಿಮಿಷದಲ್ಲಿ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಶರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರದಲ್ಲಿ ರಾತ್ರಿಯಿಡೀ ಮಳೆ ಬಿದ್ದುದನ್ನು ಕಳ್ಳರು ಉಪಯೋಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.
ಮಂಡ್ಯದಿಂದ ಬೆರಳಚ್ಚು ತಂಡದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.