ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು 1ನೇ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು 1ನೇ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಪ್ರಕರಣದಲ್ಲಿ ಬಂಧನದ ಬಳಿಕ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಅವರನ್ನು ಎ1 ಎಂದು, ದರ್ಶನ್ ಅವರನ್ನು ಎ2 ಆರೋಪಿ ಎಂದು ಪೊಲೀಸರು ಪರಿಗಣಿಸಿದ್ದರು. ಆದರೆ ತನಿಖೆ ವೇಳೆ ಇಡೀ ಕೃತ್ಯದ ಸೂತ್ರಧಾರ ದರ್ಶನ್ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಎ1 ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಈ ಕ್ರಮದಿಂದ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕೊಲೆ ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆರೋಪಿಗಳ ವಿವರವನ್ನು ಉಲ್ಲೇಖಿಸುವಾಗ ದರ್ಶನ್ ಅವರನ್ನು ಎ1 ಎಂದು ಪೊಲೀಸರು ಹೇಳಲಿದ್ದಾರೆ.
ಪ್ರದೂಷ್ ಮೊಬೈಲ್‌ನಲ್ಲಿ ಫೋಟೋ ಪತ್ತೆ:
ಇನ್ನು ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ರಕ್ತಸಿಕ್ತವಾಗಿ ಬಿದ್ದಿರುವ ಭಾವಚಿತ್ರಗಳು ದರ್ಶನ್ ಸ್ನೇಹಿತ ಪ್ರದೂಷ್ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಹತ್ಯೆ ಕೃತ್ಯದ ಬಳಿಕ ತನ್ನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಪ್ರದೂಷ್ ಡಿಲೀಟ್ ಮಾಡಿದ್ದ. ಆದರೆ ಆತನ ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ರಕ್ತಸಿಕ್ತ ಮೂರು ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಚಿಕ್ಕಣ್ಣಗೆ ಇಂದು ನೋಟಿಸ್?
ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಹೇಳಿಕೆ ನೀಡಿದ ಬಳಿಕ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದ ನಟ ಚಿಕ್ಕಣ್ಣ ಅವರಿಗೆ ಮತ್ತೆ ಪೊಲೀಸ್ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿವೆ. ಜೈಲಿನಲ್ಲಿ ದರ್ಶನ್ ಭೇಟಿ ವಿಚಾರವಾಗಿ ಸ್ಪಷ್ಟನೆ ಕೇಳಲು ಚಿಕ್ಕಣ್ಣ ಅವರಿಗೆ ಗುರುವಾರ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಅವರಿಂದ ನ್ಯಾಯಾಲಯದಲ್ಲಿ ಸಿಆರ್‌ಪಿಸಿ164ರಡಿ ಪೊಲೀಸರು ಸಾಕ್ಷಿ ಹೇಳಿಕೆ ದಾಖಲಿಸಿದ್ದರು.