ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಸೋಮವಾರ ತೀವ್ರ ನಿರಾಸೆ ಅನುಭವಿಸಿದರು
ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಸೋಮವಾರ ತೀವ್ರ ನಿರಾಸೆ ಅನುಭವಿಸಿದರು.
ದರ್ಶನ್ ಜಾಮೀನು ಪಡೆದು ಹೊರಬರುತ್ತಾರೆ, ತಮ್ಮ ಮೆಚ್ಚಿನ ನಟನನ್ನು ಹತ್ತಿರದಿಂದ ನೋಡಬಹುದು ಎಂದು ನೂರಕ್ಕೂ ಹೆಚ್ಚು ಅಭಿಮಾನಿಗಳು ಮಧ್ಯಾಹ್ನ ಜೈಲಿನ ಮುಂಭಾಗ ಜಮಾಯಿಸಿದ್ದರು. ದರ್ಶನ್ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಅಭಿಮಾನಿಗಳ ಕೂಗು ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶಿಸಿ, ಅಭಿಮಾನಿಗಳನ್ನು ಅಲ್ಲಿಂದ ಚದುರಿಸಿದರು.
ಬಳಿಕ ಮತ್ತೆ ಜೈಲು ಮುಂಭಾಗ ಅಭಿಮಾನಿಗಳು ಜಮಾಯಿಸಿ ನಟ ದರ್ಶನ್ ಪರ ಜೈಕಾರ ಹಾಕಿದರು. ಹೈ ಸೆಕ್ಯೂರಿಟಿ ಸೆಲ್‌ನಿಂದ ನಟ ದರ್ಶನ್ ಹೊರ ಬಂದು ವಿಸಿಟರ್ ರೂಂ ಕಡೆ ತೆರಳುತ್ತಿದ್ದ ವೇಳೆ ಅಭಿಮಾನಿಗಳು ಡಿ ಬಾಸ್... ಡಿ ಬಾಸ್ ಎಂದು ಕೂಗಿದರು. ಅಭಿಮಾನಿಗಳ ಕೂಗಾಟ ಜೋರಾಗುತ್ತಿದ್ದಂತೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿ ಜೈಲಿನ ಕಡೆ ಸುಳಿಯದಂತೆ ಎಚ್ಚರಿಸಿದರು. ನಟ ದರ್ಶನ್‌ಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ಸದ್ಯಕ್ಕೆ ದರ್ಶನ್ ಹೊರ ಬರುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಸ್ಥಳದಿಂದ ತೆರಳಿದರು.
ಜೈಲಿಗೆ ಬಂದರೂ ಪತಿಯನ್ನು ಭೇಟಿಯಾಗದ ವಿಜಯಲಕ್ಷ್ಮೀ:
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಂಗಿ ಗಂಡ ಸುಶಾಂತ್ ನಾಯ್ಡು, ನಟ ಧನ್ವೀರ್ ಹಾಗೂ ಹೇಮಂತ್ ದರ್ಶನ್ ಅವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.
ಎರಡು ಬ್ಯಾಗ್‌ಗಳೊಂದಿಗೆ ಆಗಮಿಸಿದ್ದ ಸುಶಾಂತ್ ನಾಯ್ಡು ಹಾಗೂ ಕುಟುಂಬ ಸದಸ್ಯರು ಬಟ್ಟೆ, ಡ್ರೈಫ್ರೂರ್ಟ್ಸ್, ಬೇಕರಿ ತಿನಿಸುಗಳನ್ನು ದರ್ಶನ್‌ಗೆ ನೀಡಿದರು.
ಇದೇ ವೇಳೆ ನ್ಯಾಯಾಲಯದ ತೀರ್ಪು ಕುರಿತು ನಟ ದರ್ಶನ್ ಅವರಿಗೆ ಸುಶಾಂತ್ ನಾಯ್ಡು, ಹೇಮಂತ್ ಮಾಹಿತಿ ನೀಡಿದರು. ಜಾಮೀನು ನಿರಾಕರಣೆಯಿಂದ ದರ್ಶನ್ ತೀವ್ರ ಬೇಸರಗೊಂಡಿದ್ದರು.
ಇದೇ ವೇಳೆ ನಟ ದರ್ಶನ್, ಬೆನ್ನುನೋವಿನ ಸಮಸ್ಯೆ ಹಾಗೂ ಆರೋಗ್ಯದಲ್ಲಾಗುತ್ತಿರುವ ಏರುಪೇರು ಕುರಿತು ಹೇಮಂತ್ ಬಳಿ ಹೇಳಿಕೊಂಡರು. ಸುಮಾರು 20 ನಿಮಿಷಳ ಕಾಲ ಹೇಮಂತ್ ಹಾಗೂ ಧನ್ವೀರ್ ಜತೆ ಮಾತುಕತೆ ನಡೆಸಿದ ನಟ ದರ್ಶನ್, ಬಳಿಕ ಹೈ ಸೆಕ್ಯೂರಿಟಿ ಸೆಲ್‌ಗೆ ತೆರಳಿದರು.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಗೆ ಬಂದಿದ್ದರೂ ದರ್ಶನ್ ಭೇಟಿಯಾಗಲಿಲ್ಲ. ಜಾಮೀನು ನಿರಾಕರಣೆ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿದ್ದ ಅವರು ಜೈಲಿನ ಕಡೆ ಸುಳಿಯದೆ ದೂರ ಉಳಿದರು. ಸದ್ಯ ವಿಜಯಲಕ್ಷ್ಮಿ ಅವರು ಬಳ್ಳಾರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಉಳಿದಿದ್ದು, ಮಂಗಳವಾರ ಕಾರಾಗೃಹಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.