ದರ್ಶನ್‌ಗೆ ಆತಿಥ್ಯ ಪ್ರಕರಣ: 7 ತಿಂಗಳ ಬಳಿಕ ಜೈಲಧಿಕಾರಿಗಳ ವಿಚಾರಣೆಗೆ ಒಪ್ಪಿಗೆ

| Published : Apr 10 2025, 02:00 AM IST

ದರ್ಶನ್‌ಗೆ ಆತಿಥ್ಯ ಪ್ರಕರಣ: 7 ತಿಂಗಳ ಬಳಿಕ ಜೈಲಧಿಕಾರಿಗಳ ವಿಚಾರಣೆಗೆ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಸೇರಿ ಕೆಲ ರೌಡಿಗಳಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಗುರಿಯಾಗಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮತ್ತು ಅಧೀಕ್ಷಕರ ವಿಚಾರಣೆ ನಡೆಸಲು ಗೃಹ ಇಲಾಖೆ ಅನುಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಸೇರಿ ಕೆಲ ರೌಡಿಗಳಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಗುರಿಯಾಗಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಮತ್ತು ಅಧೀಕ್ಷಕರ ವಿಚಾರಣೆ ನಡೆಸಲು ಗೃಹ ಇಲಾಖೆ ಅನುಮತಿ ನೀಡಿದೆ.

ಘಟನೆ ಬೆಳಗೆ ಬಂದ ಬೆನ್ನಲ್ಲೇ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಶೇಷಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೇರಿ 9 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ವಿಶೇಷ ಆತಿಥ್ಯ ಆರೋಪದ ಸಂಬಂಧ ಕಾರಾಗೃಹ ಅಧಿಕಾರಿಗಳ ವಿಚಾರಣೆ ನಡೆಸಲು ಅನುಮತಿ ಕೋರಿ ಅಗ್ನೇಯ ವಿಭಾಗದ ಡಿಸಿಪಿ ಸಾ.ರಾ.ಫಾತಿಮಾ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಇದೀಗ ಏಳು ತಿಂಗಳ ಬಳಿಕ ಗೃಹ ಇಲಾಖೆ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಿದೆ. ಹೀಗಾಗಿ ತನಿಖಾಧಿಕಾರಿ ಈ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ದರ್ಶನ್‌ ಕೇಂದ್ರ ಕಾರಾಗೃಹದ ಒಳ ಆವರಣದಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗ ಹಾಗೂ ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಜತೆ ಸಿಗರೆಟ್ ಕೈಯಲ್ಲಿ ಹಿಡಿದು ಚಹಾ ಮಗ್ ಜತೆ ಕುರ್ಚಿಯಲ್ಲಿ ವಿಲಾಸಿಯಾಗಿ ಕುಳಿತ ಫೋಟೋ ಬಹಿರಂಗವಾಗಿತ್ತು. ಅಲ್ಲದೆ, ನಟ ದರ್ಶನ್‌, ರೌಡಿ ಧರ್ಮನ ಸಹಚರನ ಜತೆ ಮೊಬೈಲ್‌ನಲ್ಲಿ ಮಾತನಾಡಿದ ವಿಡಿಯೋ ತುಣುಕು ಬಯಲಾಗಿತ್ತು.ಮೂರು ಪ್ರತ್ಯೇಕ ಎಫ್‌ಐಆರ್‌:

ಸಿಸಿಬಿ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಜೈಲು ಸಿಬ್ಬಂದಿ ಆರೋಪಿಗಳ ಬ್ಯಾರಕ್‌ನಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಟ ದರ್ಶನ್‌ ಹಾಗೂ ರೌಡಿಗಳಿಗೆ ವಿಶೇಷ ಆತಿಥ್ಯ, ಮೊಬೈಲ್ ಬಳಕೆಗೆ ಅವಕಾಶ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪೈಕಿ ಎರಡು ಪ್ರಕರಣಗಳಲ್ಲಿ ನಟ ದರ್ಶನ್‌ ಹಾಗೂ ಇತರರು ಆರೋಪಿಗಳಿದ್ದರು. ಮತ್ತೊಂದು ಪ್ರಕರಣಗಳಲ್ಲಿ ಜೈಲು ಅಧಿಕಾರಿಗಳು ಆರೋಪಿಗಳಾಗಿದ್ದರು. ಈ ಪ್ರಕರಣಗಳ ತನಿಖೆಗೆ ಎಸಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗಿತ್ತು.

ಎರಡು ಪ್ರಕರಣಗಳಲ್ಲಿ ಆರೋಪಿ ನಟ ದರ್ಶನ್‌ ಸೇರಿ ಕೆಲವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಮೂರನೇ ಪ್ರಕರಣದಲ್ಲಿ ಕೇಂದ್ರ ಕಾರಾಗೃಹಗಳ ಅಧಿಕಾರಿ ವಿಚಾರಣೆ ನಡೆಸಲು ಗೃಹ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ವಿಚಾರಣೆಗೆ ಅನುಮತಿ ನೀಡಿದೆ. ಹೀಗಾಗಿ ತನಿಖಾಧಿಕಾರಿ ಕಾರಾಗೃಹ ಅಧಿಕಾರಿಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ.