ಡೇಟಿಂಗ್‌ ಆ್ಯಪ್‌ ದೋಖಾ: ಯುವಕನನ್ನು ಮನೆಗೆ ಕರೆಸಿಕೊಂಡು ಹಣಕ್ಕೆ ಬೇಡಿಕೆ, ನಾಲ್ವರಿಂದ ಹಲ್ಲೆ

| Published : Jan 20 2024, 02:01 AM IST / Updated: Jan 20 2024, 03:43 PM IST

Dating_App

ಸಾರಾಂಶ

ಡೇಟಿಂಗ್‌ ಆ್ಯಪ್‌ ದೋಖಾ: ಯುವಕನನ್ನು ಮನೆಗೆ ಕರೆಸಿಕೊಂಡು ಹಣಕ್ಕೆ ಬೇಡಿಕೆ, ನಾಲ್ವರಿಂದ ಹಲ್ಲೆ, ತಾವರೆಕೆರೆಯ ರೂಮ್‌ವೊಂದರಲ್ಲಿ ಘಟನೆ. ದುಷ್ಕರ್ಮಿಗಳ ಪತ್ತೆಗೆ ಶೋಧ

ಕನ್ನಡಪ್ರಭ ವಾರ್ತೆ ಬೆಂಗಳೂರು

ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಪರಿಚಿತನಾಗಿದ್ದ ವ್ಯಕ್ತಿಯನ್ನು ರಾತ್ರಿ ಮನೆಗೆ ಕರೆಸಿಕೊಂಡು ಬಳಿಕ ನಾಲ್ವರು ಸೇರಿಕೊಂಡು ಹಣಕ್ಕೆ ಬೇಡಿಕೆ ಇರಿಸಿ ಹಲ್ಲೆ ನಡೆಸಿರುವ ಘಟನೆ ಮಡಿವಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಮೂರ್ತಿನಗರದ ಎನ್‌ಆರ್‌ಐ ಲೇಔಟ್‌ನ ಮೋಹಿತ್‌ (34) ( ಹೆಸರು ಬದಲಿಸಲಾಗಿದೆ) ಹಲ್ಲೆಗೆ ಒಳಗಾಗಿದವನು. ಜ. 10ರಂದು ತಾವರೆಕೆರೆಯ ವೆಂಕಟೇಶ್ವರ ಕಾಲೇಜು ರಸ್ತೆ ಸಮೀಪದ ರೂಮ್‌ವೊಂದರಲ್ಲಿ ಈ ಘಟನೆ ನಡೆದಿದೆ. 

ಹಲ್ಲೆಗೊಳಗಾದ ಮೋಹಿತ್‌ ನೀಡಿದ ದೂರಿನ ಮೇರೆಗೆ ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?
ಹಲ್ಲೆಗೊಳಗಾದ ಮೋಹಿತ್‌ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾನೆ. ಈತ ಸಲಿಂಗಕಾಮಿಯಾಗಿದ್ದು, ಗ್ರ್ಯಾಂಡರ್‌ ಎಂಬ ಡೇಟಿಂಗ್‌ ಆ್ಯಪ್‌ನಲ್ಲಿ ನೋಂದಾಯಿಸಿದ್ದ. 

ಇದೇ ಆ್ಯಪ್‌ನಲ್ಲಿ ಯುವಕನೊಬ್ಬ ಪರಿಚಿತನಾಗಿದ್ದ. ಬಳಿಕ ಇಬ್ಬರು ಪರಸ್ಪರ ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡು ಆತ್ಮೀಯವಾಗಿ ಮಾತನಾಡುತ್ತಿದ್ದರು.

 ಈ ನಡುವೆ ಜ.10ರಂದು ತಾವರೆಕೆರೆಯ ತನ್ನ ಮನೆಗೆ ಬರುವಂತೆ ಆ ಯುವಕ ಮೋಹಿತ್‌ಗೆ ಆಹ್ವಾನ ನೀಡಿದ್ದಾನೆ.

ರೂಮ್‌ನಲ್ಲಿ ನಾಲ್ವರಿಂದ ಹಲ್ಲೆ: ಡೇಟಿಂಗ್ ಆ್ಯಪ್‌ ಗೆಳೆಯನ ಆಹ್ವಾನದ ಮೇರೆಗೆ ಮೋಹಿತ್‌ ರಾತ್ರಿ ತಾವರೆಕೆರೆಗೆ ತೆರಳಿದ್ದಾನೆ. ಈ ವೇಳೆ ಆ ಯುವಕ ಮೋಹಿತ್‌ನನ್ನು ಭೇಟಿಯಾಗಿ ರೂಮ್‌ಗೆ ಕರೆದೊಯ್ದಿದ್ದಾನೆ. 

ಆದರೆ, ರೂಮ್‌ನಲ್ಲಿ ಇನ್ನೂ ಮೂವರು ಯುವಕರು ಇರುವುದನ್ನು ಕಂಡು ಮೋಹಿತ್‌ ಗಾಬರಿಗೊಂಡಿದ್ದಾನೆ. ಈ ವೇಳೆ ನಾಲ್ವರು ಸೇರಿಕೊಂಡು ಮೋಹಿತ್‌ಗೆ ಹಣ ನೀಡುವಂತೆ ಬೇಡಿಕೆ ಇರಿಸಿದ್ದಾರೆ. 

ಹಣ ಇಲ್ಲ ಎಂದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆಲ್ಟ್‌, ಕೈಗಳಿಂದ ನಾಲ್ವರು ಮೋಹಿತ್‌ ಮೇಲೆ ಹಲ್ಲೆ ಮಾಡಿ ರೂಮ್‌ನಿಂದ ಹೊರಗೆ ನೂಕಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿದ್ದ ಮೋಹಿತ್‌ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಮಡಿವಾಳ ಪೊಲೀಸ್‌ ಠಾಣೆಗೆ ಬಂದು ಹಲ್ಲೆ ಸಂಬಂಧ ದೂರು ನೀಡಿದ್ದಾನೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆ ನಾಲ್ವರು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.