ಸಾರಾಂಶ
ವಾಟರ್ ಟ್ಯಾಂಕರ್ ಎಳೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಪರಿಣಾಮ ಚಾಲಕನ ಎಂಟು ವರ್ಷದ ಮಗಳು ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ವಾಟರ್ ಟ್ಯಾಂಕರ್ ಎಳೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಪರಿಣಾಮ ಚಾಲಕನ ಎಂಟು ವರ್ಷದ ಮಗಳು ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಂದೂರು ನಿವಾಸಿ ತಿಲಕರಾಜ್ ಭಟ್ ಅವರ ಪುತ್ರಿ ಯಾನ್ಸಿಕಾ (8) ಮೃತ ಬಾಲಕಿ. ಈಕೆಯ ತಂಗಿ ಹಿಮಾಂಶಿಕಾ (6) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಶನಿವಾರ ಬೆಳಗ್ಗೆ ಸುಮಾರು 11.40ಕ್ಕೆ ಪಟ್ಟಂದೂರು ಕೆರೆ ಏರಿ ಮೇಲೆ ಈ ಘಟನೆ ನಡೆದಿದೆ.
ನೇಪಾಳ ಮೂಲದ ತಿಲಕರಾಜ್ ಭಟ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಟ್ಟಂದೂರಿನ ಕಾರ್ಮಿಕರ ಶೆಡ್‌ನಲ್ಲಿ ನೆಲೆಸಿದ್ದರು. ವಾಟರ್ ಟ್ಯಾಂಕರ್ ಎಳೆದೊಯ್ಯವ ಟ್ರ್ಯಾಕ್ಟರ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಪಟ್ಟಂದೂರು ಕೆರೆ ಏರಿ ಮೇಲೆ ನಲ್ಲೂರಹಳ್ಳಿ ಕಡೆಗೆ ಬರುತ್ತಿದ್ದಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಕೆರೆಯೊಳಗೆ ಉರುಳಿ ಬಿದ್ದಿದೆ. ಈ ವೇಳೆ ವಾಟರ್ ಟ್ಯಾಂಕರ್ ಅಡಿಗೆ ಸಿಲುಕಿದ ಹಿರಿಯ ಪುತ್ರಿ ಯಾನ್ಸಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಿರಿಯ ಪುತ್ರಿ ಹಿಮಾಂಶಿಕಾ ಹಾಗೂ ಚಾಲಕ ತಿಲಕರಾಜ್ ಭಟ್ ಗಾಯಗೊಂಡಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತಿವೇಗ ವೇಗ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*ವಾಟರ್ ಟ್ಯಾಂಕರ್ ಎಳೆದೊಯ್ಯುತ್ತಿದ್ದ ಟ್ರ್ಯಾಕ್ಟರ್‌ಗೆ ತಂದೆ ಚಾಲಕ
*ತನ್ನ ಇಬ್ಬರು ಪುತ್ರಿಯರನ್ನು ಟ್ರ್ಯಾಕ್ಟರ್‌ನಲ್ಲಿ ಕುಸಿಕೊಂಡಿದ್ದ ತಂದೆ
*ಪಟ್ಟಂದೂರು ಕೆರೆ ಏರಿ ಮೇಲೆ ನಲ್ಲೂರಹಳ್ಳಿ ಕಡೆಗೆ ಹೊರಟ್ಟಿದ್ದ ತಂದೆ
*ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಟ್ರ್ಯಾಕ್ಟರ್, ತಂದೆ, ಪುತ್ರಿಗೆ ಗಾಯ