ಸಾರಾಂಶ
ಅಹಮದಾಬಾದ್: 230 ಪ್ರಯಾಣಿಕರು, 12 ಸಿಬ್ಬಂದಿಗಳನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರಿಂಡಿಯಾದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನ ಪ್ರಯಾಣದ ಆರಂಭಿಸಿದ ಕೆಲ ಹೊತ್ತಿನಲ್ಲೇ ಪತನಗೊಂಡ ಭೀಕರ ದುರ್ಘಟನೆ ಗುರುವಾರ ಮಧ್ಯಾಹ್ನ ಇಲ್ಲಿ ಸಂಭವಿಸಿದೆ. ದೇಶದ ಇತಿಹಾಸದಲ್ಲೇ 2ನೇ ಅತಿ ದೊಡ್ಡ ವೈಮಾನಿಕ ದುರಂತವಾಗಿದ್ದು, ಈ ವಿಮಾನದಲ್ಲಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ವಿಮಾನದ ಸಹಪೈಲಟ್ ಆಗಿದ್ದ ಕನ್ನಡಿಗ ಕ್ಲೈವ್ ಸುಂದರ್ ಮತ್ತು ಮುಖ್ಯ ಪೈಲಟ್ ಸುಮೀತ್ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ. ಪವಾಡಸದೃಶ ಎನ್ನುವಂತೆ ವಿಶ್ವನಾಥ್ ಕುಮಾರ್ ರಮೇಶ್ ಎಂಬ ಬ್ರಿಟನ್ ಪ್ರಜೆ ಬದುಕುಳಿದಿದ್ದಾರೆ.
ವಿಮಾನವು ನಿಲ್ದಾಣದಿಂದ 5 ಕಿ.ಮೀ ದೂರದ ಮೇಘನಿನಗರ ಎಂಬಲ್ಲಿನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿದ್ದು, ಅಲ್ಲಿ ಕೂಡಾ 25ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಇವೆಯಾದರೂ ಈ ಕುರಿತು ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಘಟನೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್‌ಗೆ ದೌಡಾಯಿಸಿದ್ದು, ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.ಘಟನೆಯಲ್ಲಿ 169 ಭಾರತೀಯರು, 53 ಬ್ರಿಟನ್, 7 ಪೋರ್ಚಗೀಸ್, ಓರ್ವ ಕೆನಡಾ ಪ್ರಜೆ ಸೇರಿದ್ದಾರೆ, ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಗಣ್ಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಏರಿಂಡಿಯಾ ಕಂಪನಿಯ ಮಾತೃಸಂಸ್ಥೆಯಾದ ಟಾಟಾ ಗ್ರೂಪ್ ಮಡಿದವರಿಗೆ ತಲಾ 1 ಕೋಟಿ ರು. ಪರಿಹಾರ ಘೋಷಿಸಿದೆ. ಘಟನೆಗೆ ಕಾರಣ ಏನು ಎಂದು ಪತ್ತೆಯಾಗಿಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದು ಅಮೆರಿಕದ ಮೂಲದ ಬೋಯಿಂಗ್ ಕಂಪನಿಯ ಡ್ರೀಮ್‌ಲೈನರ್ 787-8 ವಿಮಾನ ಪತನಗೊಂಡ ಮೊದಲ ಉದಾಹರಣೆಯಾಗಿದೆ.
ಏನಾಯ್ತು?:242 ಜನರ ಹೊತ್ತ ವಿಮಾನ ಗುರುವಾರ ಮಧ್ಯಾಹ್ನ 1.30ರ ವೇಳೆಗೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿತ್ತು. 1.39ರ ವೇಳೆಗೆ ವಿಮಾನದ ಪೈಲಟ್‌ಗಳು ಕಂಟ್ರೋಲ್ ರೂಂಗೆ ಅಪಾಯದ ಮಾಹಿತಿ ನೀಡುವ ‘ಮೇ ಡೇ’ ಸಂದೇಶ ರವಾನಿಸಿದ್ದಾರೆ. ಆದರೆ ಅದಾದ ಬಳಿಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಭಾರೀ ಸದ್ದಿನೊಂದಿಗೆ ಸಮೀಪದ ಮೇಘನಿನಗರ ಪ್ರದೇಶದಲ್ಲಿ ಪತನಗೊಂಡು ಭಾರೀ ಬೆಂಕಿಯುಂಡೆಗಳು ಆಗಸಕ್ಕೆ ಚಿಮ್ಮಿವೆ. ದುರಂತದ ತೀವ್ರತೆಗೆ ವಿಮಾನದಲ್ಲಿದ್ದ ಓರ್ವ ಪ್ರಯಾಣಿಕನ ಹೊರತೂ ಉಳಿದವರೆಲ್ಲೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೊಂದೆಡೆ ವಿಮಾನ ಪತನಗೊಂಡ ಬಳಿಕ ಬಿ.ಜೆ.ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೂ ಅಪ್ಪಳಿಸಿದೆ. ಈ ವೇಳೆ ವಿಮಾನದ ಭಾಗಗಳು ಕಟ್ಟಡವನ್ನು ತೂರಿ ಒಳನುಗ್ಗಿದ್ದು, ಹಾಸ್ಟೆಲ್‌ನಲ್ಲಿದ್ದ ಹಲವರ ಜೀವ ಪಡೆದಿದೆ. ಊಟಕ್ಕೆಂದು ವಿದ್ಯಾರ್ಥಿಗಳು ಮಧ್ಯಾಹ್ನ ಮೆಸ್‌ಗೆ ಆಗಮಿಸಿದ್ದ ಕ್ಷಣದಲ್ಲೇ ಈ ದುರ್ಘಟನೆ ಸಂಭವಿಸಿದೆ. ವಿಮಾನ ಅಪ್ಪಳಿಸಿದ ತೀವ್ರತೆಗೆ ಹಾಸ್ಟೆಲ್ ಕಟ್ಟಡ ಛಿದ್ರಗೊಂಡಿದ್ದು, ಮೆಸ್‌ನ ಟೇಬಲ್ ಮೇಲೆ ಊಟದ ತಟ್ಟೆಗಳು ಹಾಗೆಯೇ ಉಳಿದುಕೊಂಡಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿ ಹೊರಹೊಮ್ಮಿದೆ. ಹಾಸ್ಟೆಲ್‌ನಲ್ಲಿ ಹಲವು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೆ ಈ ಕುರಿತು ನಿಖರ ಅಂಕಿ ಅಂಶಗಳು ಹೊರಬಿದ್ದಿಲ್ಲ.ಇನ್ನೊಂದೆಡೆ ವಿಮಾನ ಪತನದ ಬಳಿಕ ಹತ್ತಿಕೊಂಡ ಬೆಂಕಿ ಹಲವು ಕಟ್ಟಡ ಮತ್ತು ವಾಹನಗಳಿಗೂ ವ್ಯಾಪಿಸಿದ್ದು ಭಾರೀ ಹಾನಿಯಾಗಿದೆ.
1996ಲ್ಲಿ ಹರ್ಯಾಣದಲ್ಲಿ 2 ವಿಮಾನಗಳ ಡಿಕ್ಕಿ ಸಂಭವಿಸಿ 349 ಜನ ಸಾವನ್ನಪ್ಪಿದ್ದರು. ಅದಾದ ಬಳಿಕ ದೇಶದಲ್ಲಿ ಸಂಭವಿಸಿದ ಅತಿದೊಡ್ಡ ವಿಮಾನ ದುರಂತ ಇದಾಗಿದೆ.ಮೃತರು ಯಾರು-169 ಭಾರತೀಯರು 53 ಬ್ರಿಟನ್ ಪ್ರಜೆಗಳು 7 ಪೋರ್ಚಗೀಸ್ ಪ್ರಜೆಗಳು- ಓರ್ವ ಕೆನಡಾ ನಾಗರಿಕ- 11 ವಿಮಾನ ಸಿಬ್ಬಂದಿ--
;Resize=(128,128))
;Resize=(128,128))
;Resize=(128,128))