ಕಳೆದ ಐದಾರು ವರ್ಷಗಳಿಂದ ಬೆಳೆದ ಬೆಳೆಯಲ್ಲಿ ಯಾವುದೇ ಲಾಭ ಕಂಡಿರಲಿಲ್ಲ. ಹೀಗಾಗಿ ಮನನೊಂದು ನಮ್ಮ ಅಣ್ಣನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಷ್ಟದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದ ನವೀನ್ ಕುಮಾರ್ ಜೀವನದಲ್ಲಿ ಜಿಗುಪ್ಸೆ ಬಗ್ಗೆ ಮಾತನಾಡುತ್ತಿದ್ದನು.

ಪಾಂಡವಪುರ:

ಸಾಲಬಾಧೆ ತಾಳಲಾರದೆ ಯುವ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೀಲನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಲೇ.ಗಣೇಶಯ್ಯ ಅವರ ಪುತ್ರ ಎಚ್.ಕೆ.ನವೀನ್ ಕುಮಾರ್ (39)ಮೃತ ರೈತ. ತಮ್ಮ ಮೂರು ಎಕರೆ ಜಮೀನಿನಲ್ಲಿ ತರಕಾರಿ, ತೆಂಗು ಬೆಳೆದಿದ್ದ ರೈತ ಬೆಳೆ ಬೆಳೆಯಲು ಕಾವೇರಿ ಗ್ರಾಮೀಣಾವೃದ್ಧಿ ಬ್ಯಾಂಕ್‌ನಲ್ಲಿ 5 ಲಕ್ಷ ರು., ಹೈನುಗಾರಿಕೆಗಾಗಿ 1 ಲಕ್ಷ ರು., ಚಿನ್ನಾಭರಣದ ಮೇಲೆ 2.5 ಲಕ್ಷ ರು. ಸೇರಿದಂತೆ ಖಾಸಗಿ ಲೇವಾದೇವಿದಾರರಿಂದ 3 ಲಕ್ಷ ರು. ಪಡೆದುಕೊಂಡಿದ್ದರು.

ಸಾಲ ಮರು ಪಾವತಿಗಾಗಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮನೆಯ ದನದ ಕೊಟ್ಟಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಬೆಳೆದ ಬೆಳೆಯಲ್ಲಿ ಯಾವುದೇ ಲಾಭ ಕಂಡಿರಲಿಲ್ಲ. ಹೀಗಾಗಿ ಮನನೊಂದು ನಮ್ಮ ಅಣ್ಣನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಷ್ಟದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದ ನವೀನ್ ಕುಮಾರ್ ಜೀವನದಲ್ಲಿ ಜಿಗುಪ್ಸೆ ಬಗ್ಗೆ ಮಾತನಾಡುತ್ತಿದ್ದನು. ಸಾಲದ ಸುಳಿಯಲ್ಲಿ ಸಿಲುಕಿದ್ದ ಆತ ಸೋಮವಾರ ರಾತ್ರಿ 10.30ರ ಸಮಯದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಮೃತ ರೈತನ ಚಿಕ್ಕಪ್ಪ ನಡುಕೇರಯ್ಯ ಪೋಲಿಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಮೃತರಿಗೆ ಪತ್ನಿ ಲಕ್ಷ್ಮೀ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.ಕಾರು ಡಿಕ್ಕಿ: ಬೈಕ್‌ ಸವಾರ ಸಾವು

ಮಳವಳ್ಳಿ:ತಾಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿಯ ಮಳವಳ್ಳಿ-ಮದ್ದೂರು ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ನೆಲಮಾಕನಹಳ್ಳಿ ಗ್ರಾಮದ ಶಿವಲಿಂಗಯ್ಯ (50) ಸ್ಥಳದಲ್ಲಿಯೇ ಮೃತಪಟ್ಟರು. ಮಳವಳ್ಳಿ ಕಡೆಯಿಂದ ತಮ್ಮ ಬೈಕ್‌ನಲ್ಲಿ ಶಿವಲಿಂಗಯ್ಯ ನೆಲಮಾಕನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಮಳವಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ನ ಸವಾರ ಶಿವಲಿಂಗಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಸಿಪಿಐ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.