ಸಾರಾಂಶ
ಸಾಲಭಾದೆಯಿಂದ ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಾಜನೂರು ಗ್ರಾಮದಲ್ಲಿ ಜರುಗಿದೆ.
ಮಳವಳ್ಳಿ : ಸಾಲಭಾದೆಯಿಂದ ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಾಜನೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಲೇ.ಸಿದ್ದೇಗೌಡರ ಪತ್ನಿ ನಾಗರಾಜಮ್ಮ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಭಾನುವಾರ ಸಾಯಂಕಾಲ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸುಮಾರು ಒಂದುವರೆ ಎಕರೆ ಜಮೀನು ಹೊಂದಿದ್ದ ನಾಗರಾಜಮ್ಮ ವ್ಯವಸಾಯಕ್ಕಾಗಿ ಬ್ಯಾಂಕ್ , ಸೊಸೈಟಿ, ಸ್ತ್ರೀ ಶಕ್ತಿ ಸಂಘ ಹಾಗೂ ಖಾಸಗಿ ಸಾಲ ಸೇರಿದಂತೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದ ಇವರು ಈ ಬಾರಿ ರೇಷ್ಮೆ ಬೆಳೆಯ ಲಾಭದಲ್ಲಿ ಸ್ವಲ್ಪ ಮಟ್ಟಿನ ಸಾಲ ತೀರಿಸಿ ಉಳಿದ ಸಾಲದ ಬಡ್ಡಿ ಕಟ್ಟಿ ಸಾಲಭಾದೆ ಕಡಿಮೆ ಮಾಡಿಕೊಳ್ಳುವ ಚಿಂತನೆಯಲ್ಲಿದ್ದರು. ನಾಗರಾಜಮ್ಮ ಅವರಿಗೆ ರೇಷ್ಮೆ ಬೆಳೆಯೂ ಕೈಕೊಟ್ಟು ತೀವ್ರ ಆಘಾತಕ್ಕೆ ಒಳಗಾಗಿದ್ದರು ಎಂದು ಗ್ರಾಮದ ಮುಖಂಡರಾದ ಲೋಕೇಶ್, ಗಿರೀಶ್, ರಾಮಣ್ಣ ತಿಳಿಸಿದ್ದಾರೆ.
ಸಾಲಭಾದೆಯಿಂದ ಬೇಸತ್ತ ನಾಗರಾಜಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಪುತ್ರ ಸಿದ್ದರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು
ಮಳವಳ್ಳಿ: ಎರಡು ಬೈಕ್‌ಗಳ ನಡುವಿನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ದುಗ್ಗನಹಳ್ಳಿ ಬಳಿ ನಡೆದಿದೆ.ತಾಲೂಕಿನ ಮಾದಹಳ್ಳಿ ಕೆಂಪಣ್ಣ (75) ಮೃತಪಟ್ಟವರು. ಪತ್ನಿ ಜತೆ ಕೆಂಪಣ್ಣ ತಮ್ಮ ಬೈಕ್‌ನಲ್ಲಿ ಶನಿವಾರ ತಾಲೂಕಿನ ದುಗ್ಗನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಕೆಂಪಣ್ಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.