ದೋಷಪೂರಿತ ನಂ.ಪ್ಲೇಟ್‌: ಬೈಕ್‌ ಸವಾರನ ಬಂಧನ

| Published : Feb 27 2024, 01:31 AM IST

ಸಾರಾಂಶ

ದ್ವಿಚಕ್ರ ವಾಹನಕ್ಕೆ ದೋಷಪೂರಿತ ನೋಂದಣಿ ಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದ ಸವಾರನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದ್ವಿಚಕ್ರ ವಾಹನಕ್ಕೆ ದೋಷಪೂರಿತ ನೋಂದಣಿ ಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದ ಸವಾರನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್‌ನ ಮೊಹಮ್ಮದ್‌ ಅಶ್ರಫ್‌ (26) ಬಂಧಿತ ಸವಾರ. ಫೆ.6ರಂದು ರಾತ್ರಿ 9.56ರ ಸುಮಾರಿಗೆ ತೂಬರಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ದೋಷಪೂರಿತ ನೋಂದಣಿ ಫಲಕ ಅಳವಡಿಸಿಕೊಂಡು ಓಡಾಡುತ್ತಿದ್ದ. ಇದನ್ನು ಗಮನಿಸಿರುವ ಸಾರ್ವಜನಿಕರೊಬ್ಬರು ದ್ವಿಚಕ್ರ ವಾಹನ ಸಹಿತ ಫೋಟೋ ತೆಗೆದು ನಗರ ಸಂಚಾರ ಪೊಲೀಸರ ಎಕ್ಸ್‌ ಖಾತೆಗೆ ಟ್ಯಾಗ್‌ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಈ ದೂರಿನ ಮೇರೆಗೆ ವೈಟ್‌ಫೀಲ್ಡ್‌ ಸಂಚಾರ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ ಆ ದ್ವಿಚಕ್ರ ವಾಹನ ಪತ್ತೆಹಚ್ಚಿ, ಅದರ ಸವಾರ ಮೊಹಮ್ಮದ್‌ ಅಶ್ರಫ್‌ನನ್ನು ವಶಕ್ಕೆ ಪಡೆದು ವರ್ತೂರು ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- - -

ಬೈಕ್‌ ವ್ಹೀಲಿಂಗ್‌: ಅಪ್ರಾಪ್ತ ಸೇರಿ ಮೂವರ ಬಂಧನಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಸೇರಿ ಮೂವರು ಸವಾರರನ್ನು ಬಂಧಿಸಿದ್ದಾರೆ.ಬಾಣಸವಾಡಿಯ ವೆಂಕಟರಮಣ(20) ಮತ್ತು ಸಿ.ಸಂಜಯ್‌(23) ಬಂಧಿತರು. ಫೆ.24ರಂದು ಠಾಣಾ ವ್ಯಾಪ್ತಿಯ 100 ಅಡಿ ರಸ್ತೆಯಲ್ಲಿ ಮೂವರು ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್‌ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಸಂಚಾರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಇಬ್ಬರು ಸವಾರರ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತೊಬ್ಬ ಸವಾರ ಅಪ್ರಾಪ್ತನಾಗಿರುವುದರಿಂದ ದ್ವಿಚಕ್ರ ವಾಹನದ ಮಾಲೀಕನ ವಿರುದ್ಧ ಪ್ರತ್ಯೇಕ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.