ಸ್ಥಳೀಯ ಎಳನೀರು ವರ್ತಕನಿಂದ ಎಳನೀರು ಖರೀದಿಸಿದ ದೆಹಲಿ ಮೂಲದ ವರ್ತಕನೊಬ್ಬ ಹಣ ನೀಡದೆ ೨೫ ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಘಟನೆ ನಡೆದಿದೆ. ಹಣ ಕೇಳಲು ವರ್ತಕನನ್ನು ಹುಡುಕಿಕೊಂಡು ದೆಹಲಿಗೆ ಹೋದವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಥಳೀಯ ಎಳನೀರು ವರ್ತಕನಿಂದ ಎಳನೀರು ಖರೀದಿಸಿದ ದೆಹಲಿ ಮೂಲದ ವರ್ತಕನೊಬ್ಬ ಹಣ ನೀಡದೆ ೨೫ ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಘಟನೆ ನಡೆದಿದೆ.

ಹಣ ಕೇಳಲು ವರ್ತಕನನ್ನು ಹುಡುಕಿಕೊಂಡು ದೆಹಲಿಗೆ ಹೋದವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ. ರೈತರಿಂದ ಎಳನೀರು ಖರೀದಿಸಿರುವ ಸ್ಥಳೀಯ ವರ್ತಕ ಹಣ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರೆ, ಇದು ದೆಹಲಿ ಮೂಲದ ವರ್ತಕನೊಂದಿಗೆ ಆಗಿರುವ ಅನಧಿಕೃತ ಒಪ್ಪಂದ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ.

ತಾಲೂಕಿನ ದುದ್ದ ಗ್ರಾಮದ ಎಳನೀರು ವರ್ತಕ ಶರತ್ ಎಂಬುವರೇ ವಂಚನೆಗೊಳಗಾದವರು. ದೆಹಲಿ ಮೂಲದ ಅನಾಮ್ ಹಣ ನೀಡದೆ ವಂಚಿಸಿದವನಾಗಿದ್ದಾನೆ. ಅನಾಮ್ ಕಳೆದ ಎರಡು-ಮೂರು ವರ್ಷಗಳಿಂದ ಶರತ್ ಅವರೊಂದಿಗೆ ಎಳನೀರು ವ್ಯವಹಾರ ನಡೆಸುತ್ತಿದ್ದನು. ಹಲವಾರು ಬಾರಿ ಒಂದೆರಡು ಲೋಡ್ ಎಳನೀರು ಖರೀದಿಸಿ ಸಕಾಲದಲ್ಲಿ ಹಣ ಕೊಟ್ಟು ನಂಬಿಕೆ ಹುಟ್ಟುವಂತೆ ಮಾಡಿದ್ದನು ಎನ್ನಲಾಗಿದೆ.

ಕಳೆದ ವಾರ ಮಂಡ್ಯಕ್ಕೆ ಬಂದಿದ್ದ ಅನಾಮ್ ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದನು. ಈ ವೇಳೆ ಶರತ್‌ನನ್ನು ಭೇಟಿ ಮಾಡಿದ ಅನಾಮ್ ಈಗ ಎಳನೀರಿಗೆ ಒಳ್ಳೆಯ ಬೇಡಿಕೆ ಇದೆ. ನನಗೆ ಆರೇಳು ಲೋಡ್ ಎಳನೀರು ಬೇಕೆಂದು ಬೇಡಿಕೆ ಇಟ್ಟನು. ಹಿಂದೆ ಅನಾಮ್ ಹಣ ಕೊಟ್ಟು ನಂಬಿಕೆ ಉಳಿಸಿಕೊಂಡಿದ್ದರಿಂದ ಅವನ ಎಳನೀರು ಬೇಡಿಕೆಯನ್ನು ಶರತ್ ಸುಲಭವಾಗಿ ಒಪ್ಪಿಕೊಂಡರು. ನಾನು ಕಳುಹಿಸುವ ಲಾರಿಗಳಲ್ಲಿ ಎಳನೀರು ಲೋಡ್ ಕಳುಹಿಸಿದರೆ ಹಣ ಪಾವತಿಸುವುದಾಗಿ ಹೇಳಿ ದೆಹಲಿಗೆ ಅನಾಮ್ ತೆರಳಿದ್ದನು.

ಅನಾಮ್ ನೀಡಿದ ಮಾತಿನಂತೆ ಶರತ್ ರೈತರಿಂದ ಸಾಲದ ಮೇಲೆ, ನಗದು ರೂಪದಲ್ಲೂ ಎಳನೀರು ಖರೀದಿಸಿ ದೆಹಲಿಗೆ ಸುಮಾರು ೩೩ ಲಕ್ಷ ರು. ಮೌಲ್ಯದ ಎಳನೀರನ್ನು ಸರಬರಾಜು ಮಾಡಿದ್ದರು. ಅದರಲ್ಲಿ ಸುಮಾರು ಏಳೆಂಟು ಲಕ್ಷ ರು. ಹಣವನ್ನೂ ಅನಾಮ್ ಪಾವತಿ ಮಾಡಿದ್ದನು. ಕೊನೆಯ ಲಾರಿಗೆ ಎಳನೀರು ಲೋಡ್ ಮಾಡುವ ಸಮಯಕ್ಕೆ ಬಾಕಿ ಹಣಕ್ಕೆ ಶರತ್ ಬೇಡಿಕೆ ಇಟ್ಟಾಗ ಅನಾಮ್ ನಾನು ಕಷ್ಟದಲ್ಲಿದ್ದೇನೆ. ಸದ್ಯಕ್ಕೆ ಹಣ ಪಾವತಿಸುವುದಕ್ಕೆ ಸಾಧ್ಯವಿಲ್ಲವೆಂದು ಹಿಂದೇಟು ಹಾಕಿದ್ದಾನೆ. ಶರತ್ ಅವರ ಫೋನ್ ಕರೆಗಳನ್ನು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದನು.

ಗನ್ ತೋರಿಸಿ ಬೆದರಿಕೆ:

ಶರತ್ ತಮ್ಮ ಪರಿಚಿತರನ್ನು ದೆಹಲಿಗೆ ಕಳುಹಿಸಿ ಅನಾಮ್‌ನನ್ನು ಭೇಟಿ ಮಾಡಿದಾಗ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇದೆ ಎಂದು ಸಬೂಬು ಹೇಳಿದನು. ಅಷ್ಟೇ ಅಲ್ಲದೇ, ನಾನೊಬ್ಬನೇ ಮೋಸ ಮಾಡಿಲ್ಲ, ಎಲ್ಲರೂ ಮಾಡಿದ್ದಾರೆ, ನಾನ್ಯಾಕೆ ಹಣ ಕೊಡಲಿ. ಏನು ಬೇಕಾದರೂ ಮಾಡಿಕೊಳ್ಳಿ ಎಂದಿದ್ದಾನೆ. ಹಣಕ್ಕೆ ತೀವ್ರವಾಗಿ ಬೇಡಿಕೆ ಇಟ್ಟಾಗ ದೆಹಲಿಗೆ ತೆರಳಿದ್ದವರಿಗೆ ಅನಾಮ್ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದರಿಂದ ಎಚ್ಚೆತ್ತ ಶರತ್ ಮತ್ತು ಇತರರು ಎಳನೀರು ತುಂಬಿದ್ದ ಕೊನೆಯ ಲೋಡ್ ಲಾರಿಯನ್ನು ಬಿಡದೆ ಅಡ್ಡಗಟ್ಟಿ ನಿಲ್ಲಿಸಿದರು. ಅತ್ತ ಮಾರಿದ ಎಳನೀರಿಗೆ ಹಣವೂ ಸಿಗದೆ, ಇತ್ತ ರೈತರಿಗೆ ಬಟವಾಡೆ ಮಾಡಲಾಗದೆ ಶರತ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ರೈತರು ಬಾಕಿ ಹಣಕ್ಕಾಗಿ ನಿರಂತರ ಒತ್ತಡ ಹೇರುತ್ತಿದ್ದು, ದಿಕ್ಕು ತೋಚದ ವರ್ತಕ ಶರತ್ ರೈತ ಸಂಘಟನೆಗಳ ಬೆಂಬಲದೊಂದಿಗೆ ಮೊದಲು ಸುಂಡಹಳ್ಳಿ ಮಾರುಕಟ್ಟೆ ಎದುರು ಮತ್ತು ನಂತರ ೨೦ಕ್ಕೂ ಹೆಚ್ಚು ಎಳನೀರು ವಾಹನಗಳೊಂದಿಗೆ ಬಂದು ಮಂಡ್ಯ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ಗೋಪಾಲಪುರ ಸುರೇಶ್, ಶ್ರೀರಂಗಪಟ್ಟಣ ರೈತ ಸಂಘದ ಜವರೇಗೌಡ ಹಾಗೂ ಇತರರು ಭಾಗವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಸಿಪಿಐ ಪ್ರಕಾಶ್ ಅವರು ದೂರು ಪಡೆದು, ಆರೋಪಿ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಅನಾಮ್ ನನಗೆ ಎರಡು ವರ್ಷಗಳಿಂದ ಪರಿಚಯವಿದ್ದ. ಹಲವು ಬಾರಿ ಎರಡು-ಮೂರು ಲೋಡ್ ಎಳನೀರು ಪಡೆದು ಹಣವನ್ನೂ ಕೊಟ್ಟಿದ್ದ. ಅದೇ ನಂಬಿಕೆಯೊಂದಿಗೆ ಈ ಬಾರಿಯೂ ಏಳೆಂಟು ಲೋಡ್ ಎಳನೀರು ಕಳುಹಿಸಿದ್ದೆ. ಒಟ್ಟು ೩೩ ಲಕ್ಷ ರು. ಹಣದಲ್ಲಿ ೭ ರಿಂದ ೮ ಲಕ್ಷ ರು. ಕೊಟ್ಟಿದ್ದಾನೆ. ಉಳಿಕೆ ಹಣ ನೀಡದೆ ಸತಾಯಿಸುತ್ತಿದ್ದು, ಕೊನೆಯ ಲೋಡ್ ಲಾರಿ ಕಳುಹಿಸದೆ ಹಿಡಿದಿಟ್ಟುಕೊಂಡಿದ್ದೇನೆ. ಹಣ ಕೊಡುವವರೆಗೆ ಲಾರಿಯನ್ನು ಬಿಡುವುದಿಲ್ಲ.

- ಶರತ್, ಸ್ಥಳೀಯ ಎಳನೀರು ವರ್ತಕಶರತ್ ಎಪಿಎಂಸಿ ಪರವಾನಗಿ ಪಡೆದಿರುವ ವರ್ತಕ. ಅನಾಮ್ ಯಾರೋ ನಮಗೆ ಗೊತ್ತಿಲ್ಲ. ಶರತ್ ಮತ್ತು ಅನಾಮ್ ನಡುವೆ ನಡೆದಿರುವುದು ಅನಧಿಕೃತ ವ್ಯವಹಾರ. ನಾವು ಹೊರರಾಜ್ಯದ ಯಾವುದೇ ವರ್ತಕರಿಗೆ ಪರವಾನಗಿ ಕೊಟ್ಟಿಲ್ಲ. ವ್ಯವಹಾರವನ್ನೂ ನಡೆಸುತ್ತಿಲ್ಲ. ಸ್ಥಳೀಯ ನೋಂದಾಯಿತ ವರ್ತಕರು ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ. ಹಾಗಾಗಿ ಈ ವ್ಯವಹಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ

-ಶ್ರೀಹರಿ, ಕಾರ್ಯದರ್ಶಿ, ಎಪಿಎಂಸಿ