ಹಿಡಲಕ್‌ ಸಂತ್ರಸ್ತರಿಗೆ ಭೂಮಿ ನೀಡಲು ಒತ್ತಾಯ

| Published : Nov 17 2023, 06:45 PM IST

ಹಿಡಲಕ್‌ ಸಂತ್ರಸ್ತರಿಗೆ ಭೂಮಿ ನೀಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 58 ಕುಟುಂಬಗಳಿಗೆ ಸರ್ಕಾರದಿಂದ ಭೂ ಮಂಜೂರಾತಿ ಆದೇಶವಾಗಿ 43 ವರ್ಷ ಕಳೆದಿದ್ದರೂ ಭೂಮಿ ಮಾತ್ರ ಈವರೆಗೂ ಸಿಕ್ಕಿಲ್ಲ. ಅವರ ಹೆಸರಿನಲ್ಲಿ ಪಹಣಿ ಪತ್ರಿಕೆಗಳು ತಯಾರಾಗಿಲ್ಲ. ಮಂಜೂರಾದ ಜಮೀನುಗಳು ಹಾಗೂ ನಿವೇಶಗಳು ಎಲ್ಲಿವೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಿಗೆ ಭೂಮಿ ನೀಡುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ನಿರಾಶ್ರಿತರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸುಮಾರು 58 ಕುಟುಂಬಗಳಿಗೆ ಸರ್ಕಾರದಿಂದ ಭೂ ಮಂಜೂರಾತಿ ಆದೇಶವಾಗಿ 43 ವರ್ಷ ಕಳೆದಿದ್ದರೂ ಭೂಮಿ ಮಾತ್ರ ಈವರೆಗೂ ಸಿಕ್ಕಿಲ್ಲ. ಅವರ ಹೆಸರಿನಲ್ಲಿ ಪಹಣಿ ಪತ್ರಿಕೆಗಳು ತಯಾರಾಗಿಲ್ಲ. ಮಂಜೂರಾದ ಜಮೀನುಗಳು ಹಾಗೂ ನಿವೇಶಗಳು ಎಲ್ಲಿವೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ ಎಂದು ಆರೋಪಿಸಿದರು.

ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯಲು ಡಿಸೆಂಬರ್‌ 1 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ತ ಕುಟುಂಬಗಳೊಂದಿಗೆ ಅನಿರ್ಧಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಕುರಿತು ದಾಖಲೆಗಳ ಸಮೇತವಾಗಿ ಕಂದಾಯಸಚಿವರು, ಸಂಬಂಧಿಸಿದ ಅಧಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಹುಕ್ಕೇರಿ ತಾಲೂಕಿನ ಬೀರನಹೊಳಿ, ಮನಗುತ್ತಿ, ಇಸ್ಲಾಂಪೂರ, ಗುಡನಟ್ಟಿ, ಹಳೆವಂಟಮೂರಿ ಮುಂತಾದ ಗ್ರಾಮಗಳ ಬಡ ಕುಟುಂಬಗಳು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ತಮ್ಮ ಫಲವತ್ತಾದ ಜಮೀನುಗಳನ್ನು ಕಳೆದುಕೊಂಡಿರುವರು. ಮುಳುಗಡೆ ಪ್ರದೇಶದ ಜನರಿಗೆ ಹಂಚಿಕೆ ಮಾಡುವ ಸಲುವಾಗಿಯೇ ಸರ್ಕಾರ ಸಾಕಷ್ಟು ಜಮೀನವನ್ನು ಕಾಯ್ದಿರಿಸಿದೆ. ಆದರೆ 43 ವರ್ಷಗಳಿಂದ ಇಲ್ಲಿಯವರೆಗೆ ನಮ್ಮ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದರು.

ಸರ್ಕಾರದಿಂದ ತಮಗೆ ಮಂಜೂರಾಗಿರುವ ಜಮೀನುಗಳಿಗೆ ತಮ್ಮ ಹೆಸರು ದಾಖಲು ಮಾಡಿ ಸದರ ಉತಾರಗಳಲ್ಲಿ ಇರುವಷ್ಟು ಜಮೀನು ಅಳತೆ ಮಾಡಿಸಿ ಈ ಜಮೀನುಗಳನ್ನು ಸಾಗುವಳಿ ಮಾಡಲು ತಮ್ಮ ವಶಕ್ಕೆ ಕೊಡುವಂತೆ ಮತ್ತು ತಮಗೆ ಮಂಜೂರಾದ ನಿವೇಶನಗಳನ್ನು ಗುರುತಿಸಿ ಕೊಡುವಂತೆ ಬೀದಿ ಪಾಲಾಗಿರುವ ಈ ಕುಟುಂಬಗಳು ಸುಮಾರು 43 ವರ್ಷಗಳಿಂದ ಕಚೇರಿಗೆ ಅಲೆದಾಡಿ ಇದೂವರೆಗೂ ಪರಿಹಾರ ಸಿಗದೇ ಇರುವುದರಿಂದ ಮಾನಸಿಕ ಅಸ್ವಸ್ಥರಾಗಿರುವ ಕೆಲ ಕುಟುಂಬಗಳು ಆತ್ಮಹತ್ಯೆಗೆ ಚಿಂತನೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಯಾವುದೇ ಸಮಸ್ಯೆಗಳಿದ್ದರೂ ಸ್ಥಳದಲ್ಲಿಯೇ ಅಥವಾ ವಾರದೊಳಗಾಗಿ ಪರಿಹಾರ ದೊರಕಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳುತ್ತಿರುವ ಜಿಲ್ಲಾ ಜನತಾದರ್ಶನ ಕಾರ್ಯಕ್ರಮದಲ್ಲಿಯೂ ಕೂಡಾ ಈ ಕುಟುಂಬಗಳು ಸಲ್ಲಿಸಿರುವ ಮನವಿಗೆ ಯಾವುದೇ ಪರಿಹಾರ ದೊರಕಿರುವುದಿಲ್ಲ. ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.16ಬಿಇಎಲ್‌1