ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ನಡೆಯಲಿರುವ ಉಮರ್‌ ಖಾಲಿದ್‌ ಬೆಂಬಲಿಸುವ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಸೋಮವಾರ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಅವರನ್ನು ಭೇಟಿಯಾದ ಈ ನಿಯೋಗವು ಕಾರ್ಯಕ್ರಮ ರದ್ದುಪಡಿಸುವಂತೆ ಮನವಿ ಪತ್ರ ಸಲ್ಲಿಸಿತು.

ಭಯೋತ್ಪಾದನಾ ಕಾಯ್ದೆಯಡಿ ಬಂಧಿತನಾಗಿರುವ ಉಮರ್‌ ಖಾಲಿದ್‌ನನ್ನು ಬೆಂಬಲಿಸಲು ಉಮರ್‌ ಖಾಲಿದ್‌ ಪ್ರಪಂಚ ಎಂಬ ವೇದಿಕೆಯಿಂದ ನಗರದಲ್ಲಿ ವಿಚಾರ ಸಂಕಿರಣ ಏರ್ಪಡಿಸಿದ್ದಾರೆ. ಕೇಂದ್ರ ಸರ್ಕಾರವು ದೇಶದ ಎಲ್ಲೆಡೆ ನಕ್ಸಲರನ್ನು ಬಗ್ಗು ಬಡಿದಿದೆ. ಆದರೆ, ನಗರ ನಕ್ಸಲರು ಮಾತ್ರ ಇನ್ನೂ ಸಕ್ರಿಯವಾಗಿದ್ದು, ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.

ಅಪರಾಧಿಗಳಿಗೆ ಉತ್ತೇಜನ ಸಲ್ಲದು:

ಉಮರ್ ಖಾಲೀದ್ ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಕಳೆದ 3 ವರ್ಷದಿಂದ ಇವನಿಗೆ ನ್ಯಾಯಲಯಗಳು ಜಾಮೀನು ನೀಡಲು ನಿರಾಕರಿಸಿರುವುದು ಇವನ ಅಪರಾಧಿ ಚಟುವಟಿಕೆಗೆ ಸಾಕ್ಷಿಯಾಗಿದೆ. ಇವನನ್ನು ವೈಭವೀಕರಿಸುವುದು ಅಪರಾಧಿಗಳಿಗೆ ಉತ್ತೇಜನ ಕೊಡುವ ದುಷ್ಕೃತ್ಯವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ನಮ್ಮ ನಗರದಲ್ಲಿ ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.


ಅನುಮತಿ ಹಿಂಪಡೆಯಿರಿ:ಈಗಾಗಲೇ ನಗರದ ಗೋಡೆಗಳ ಮೇಲೆ ಉಮರ್ ಖಾಲಿದ್ ಬೆಂಬಲಿಸಿ ಗೋಡೆ ಬರಹಗಳನ್ನು ಬರೆಯುತ್ತಿರುವುದು ಇವರ ಜಾಲ ಹರಡುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ನಗರದ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ವಿಚಾರ ಸಂಕಿರಣ ನಡೆಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು. ಈ ಕಾರ್ಯಕ್ರಮ ನಡೆದರೆ ಅಲ್ಲಿ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾದರೆ ಬಿಜೆಪಿಯು ಹೊಣೆಯಾಗುವುದಿಲ್ಲ. ನಗರದ ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಬಿಜೆಪಿಯ ನಿಯೋಗದಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಸ್‌.ಪ್ರಕಾಶ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ ಸೇರಿದಂತೆ ಇತರೆ ಮುಖಂಡರು ಇದ್ದರು.

ಸಿಪಿ ಸರ್‌ಗೆ ಪತ್ರ, ನನಗೆ ಸಂಬಂಧವಿಲ್ಲ !

ಭಯೋತ್ಪಾದಕ ಉಮರ್‌ ಖಾಲಿದ್‌ನನ್ನು ವೈಭವೀಕರಿಸುವ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿ ರದ್ದುಪಡಿಸುವಂತೆ ಒತ್ತಾಯಿಸಿ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಪತ್ರ ನೀಡಲಾಗಿದೆ. ಆಶ್ಚರ್ಯವೆಂದರೆ, ಸ್ವೀಕೃತಿ ಪತ್ರ ಕೊಡುವಾಗ ‘ಸಿಪಿ ಸರ್‌ಗೆ ಪತ್ರ ನೀಡಿದ್ದಾರೆ. ನನಗೆ ಸಂಬಂಧವಿಲ್ಲ’ ಎಂದು ಬರೆದು ಕೊಟ್ಟಿದ್ದಾರೆ. ಹೀಗೆ ಬರೆದು ಕೊಡುವುದು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಅವಮಾನವಾಗಲಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್‌.ಪ್ರಕಾಶ್‌ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.