ಸಾರಾಂಶ
ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡು ಖಾಸಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಕೋಣನಕುಂಟೆ ನಿವಾಸಿ ವಿಶಾಲಾಕ್ಷಿ (38) ಮೃತ ದುರ್ದೈವಿ. ಮನೆಯಲ್ಲಿ ಮಧ್ಯಾಹ್ನ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮೃತರ ನಾಲ್ಕು ವರ್ಷದ ಮಗುವಿನ ಚೀರಾಟ ಕೇಳಿದ ನೆರೆಹೊರೆಯರು ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಭುಲಿಂಗಯ್ಯ ಹಾಗೂ ವಿಶಾಲಕ್ಷಿ ವಿವಾಹವಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಬೇಗೂರಿನ ಖಾಸಗಿ ಬ್ಯಾಂಕ್‌ನಲ್ಲಿ ಶಂಭುಲಿಂಗಯ್ಯ ವ್ಯವಸ್ಥಾಪಕರಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳು ತೆರಳಿದ ಬಳಿಕ ನೇಣು ಬಿಗಿದುಕೊಂಡು ವಿಶಾಲಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮನೆಯಲ್ಲಿ ಮೃತರ ಮಗಳು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಗು ಅಳುವುದು ಕೇಳಿ ಅವರ ಮಹಡಿ ಮನೆಯಲ್ಲಿ ನಿವಾಸಿಗಳು ಬಂದಿದ್ದಾರೆ. ಬಾಗಿಲು ಬಡಿದಾಗಲೂ ಒಳಗಿನಿಂದ ವಿಶಾಲಾಕ್ಷಿ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ನೆರೆಹೊರೆಯವರು ತಕ್ಷಣವೇ ಮೃತರ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಬಂದು ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಶಂಭುಲಿಂಗಯ್ಯ ಅವರು ಒಳ ಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ಪತ್ನಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಮೃತರ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಪೋಷಕರು ಕೊಡುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.