ಚಿನಕುರಳಿ ಪೊಲೀಸ್ ಠಾಣೆಯನ್ನು ಸಚಿವರು ಸ್ಥಳಾಂತರಿಸಿಲ್ಲ: ಸಿ.ಡಿ.ಗಂಗಾಧರ್

| Published : Jul 01 2025, 01:48 AM IST

ಸಾರಾಂಶ

ಮಂಡ್ಯ ಜಿಲ್ಲೆಯ ಜೆಡಿಎಸ್ ನವರು ಬರೀ ಸುಳ್ಳು ಆರೋಪ ಮಾಡುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. ಅವರ ಆಡಳಿತದಲ್ಲಿ ಜಿಲ್ಲೆಯಲ್ಲಿ ಸಾಧನೆ ಏನು?, ಮೈಷುಗರ್ ಕಾರ್ಖಾನೆ ನಿಲ್ಲಿಸಿದ್ದು ಅವರ ಸಾಧನೆ. ಎಚ್ಡಿಕೆ ಗೆದ್ದರೆ ಮೇಕೆದಾಟು ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರ ಬಗ್ಗೆ ಚಿಂತಿಸಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಚಿನಕುರಳಿ ಗ್ರಾಮಕ್ಕೆ ಮಂಜೂರಾಗಿರುವ ಪೊಲೀಸ್ ಠಾಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಕ್ಯಾತನಹಳ್ಳಿಗೆ ಸ್ಥಳಾಂತರಿಸಿಲ್ಲ. ಬದಲಿಗೆ ಗ್ರಾಮಕ್ಕೆ ಹೊಸ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನಕುರಳಿ ಗ್ರಾಮದ ಹೊರ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿದ್ದಾರೆ. ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿಲ್ಲ. ಇದನ್ನೇ ತಪ್ಪಾಗಿ ಗ್ರಹಿಸಿ ಮಾಜಿ ಶಾಸಕರು, ಮುಖಂಡರು ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಿದ್ದಾರೆ ಎಂಬುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದರು.

ಚಿನಕುರಳಿ ಗ್ರಾಮದಿಂದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದರೆ ದಾಖಲೆ ನೀಡಲಿದೆ. ಸಚಿವರು ದ್ವೇಷ ರಾಜಕಾರಣ ಮಾಡಿಲ್ಲ. ಜಿಲ್ಲೆಗೆ ಇನ್ನೂ ಹೆಚ್ಚುವರಿ ಪೊಲೀಸ್ ಠಾಣೆಗಳು ಬೇಕಿದ್ದರೆ ಮಂಜೂರು ಮಾಡಿಸಿಕೊಡಲಿದ್ದಾರೆ ಎಂದರು.

ಜಿಲ್ಲೆಯ ಜೆಡಿಎಸ್ ನವರು ಬರೀ ಸುಳ್ಳು ಆರೋಪ ಮಾಡುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. ಅವರ ಆಡಳಿತದಲ್ಲಿ ಜಿಲ್ಲೆಯಲ್ಲಿ ಸಾಧನೆ ಏನು?, ಮೈಷುಗರ್ ಕಾರ್ಖಾನೆ ನಿಲ್ಲಿಸಿದ್ದು ಅವರ ಸಾಧನೆ. ಎಚ್ಡಿಕೆ ಗೆದ್ದರೆ ಮೇಕೆದಾಟು ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರ ಬಗ್ಗೆ ಚಿಂತಿಸಲಿ. ನಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲಾಗಿದೆ ಈ ರೀತಿ ಸುಳ್ಳು ಆರೋಪ ನಡೆಸಲಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಚಿನಕುರಳಿ ಗ್ರಾಮದ ಸಿ.ಆರ್.ರಮೇಶ್, ಸಿದ್ದಲಿಂಗೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಉಮಾಶಂಕರ್, ಬಿ.ಜೆ.ಸ್ವಾಮಿ, ಡಿ.ಹುಚ್ಚೇಗೌಡ, ಕಣಿವೆರಾಮು, ಮಹಮದ್ ಹನೀಫ್ ಸೇರಿದಂತೆ ಹಲವರು ಇದ್ದರು.