ಅನುಮತಿ ಪಡೆಯದೆ ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್‌ ಪ್ರತಿಭಟನೆ : ಪೊಲೀಸ್ ಆಯುಕ್ತರಿಗೆ ದೂರು

| N/A | Published : Jul 01 2025, 01:47 AM IST / Updated: Jul 01 2025, 08:09 AM IST

ಅನುಮತಿ ಪಡೆಯದೆ ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್‌ ಪ್ರತಿಭಟನೆ : ಪೊಲೀಸ್ ಆಯುಕ್ತರಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೊಲೀಸರ ಅನುಮತಿ ಪಡೆಯದೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಮುಖಂಡರ ನಿಯೋಗವು ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

 ಬೆಂಗಳೂರು :  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೊಲೀಸರ ಅನುಮತಿ ಪಡೆಯದೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಮುಖಂಡರ ನಿಯೋಗವು ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. 

ಸೋಮವಾರ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರ ನಿಯೋಗವು ಪೊಲೀಸ್ ಆಯುಕ್ತ ಸೀಮಂತಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದರು.ಶನಿವಾರದಂದು ನಮ್ಮ ಪಕ್ಷದ ಕಚೇರಿಯಲ್ಲಿ ಸಭೆ ನಡೆದು ಹೊರಬರುತ್ತಿರುವಾಗ ಕಾಂಗ್ರೆಸ್ಸಿನ ಸುಮಾರು 13 ಕಾರ್ಯಕರ್ತರು ಬಂದು ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. 

ನಮ್ಮಲ್ಲೂ 200-300 ಕಾರ್ಯಕರ್ತರು ಅಲ್ಲೇ ನಿಂತಿದ್ದರು. ನಾವು ಮನಸ್ಸು ಮಾಡಿದ್ದರೆ ಅಲ್ಲೇ ಅವರನ್ನು ತಡೆಯಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ. ಆದರೆ ಅನುಮತಿ ಇಲ್ಲದೆ, ಪೊಲೀಸರಿಗೆ ಗೊತ್ತೇ ಇಲ್ಲದಂತೆ ಪ್ರತಿಭಟಿಸಿದರೆ ಅದು ಗೂಂಡಾವರ್ತಿ ಆಗುತ್ತದೆ ಎಂದು ವಿವರಿಸಿದರು. ಅವರನ್ನು ಬಂಧಿಸಿ ಕರೆದೊಯ್ದ 15 ನಿಮಿಷಕ್ಕೆ ಮತ್ತೊಮ್ಮೆ ಏಳೆಂಟು ಜನರು ಪ್ರತಿಭಟನೆ ಮಾಡಿದ್ದಾರೆ. 

13ರಂದು 26ರಂದು ಸೇರಿ ಒಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಈ ರೀತಿ ಪ್ರತಿಭಟಿಸಿದ್ದಾರೆ. ಆದರೆ, ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ನಾವು ಪೋಸ್ಟರ್ ಅಂಟಿಸಿದ್ದಕ್ಕೆ ಕೇಸ್ ಹಾಕಿದ್ದಾರೆ. ಈಗ ಕೋರ್ಟಿಗೆ ಅಲೆದಾಡುತ್ತಿದ್ದೇವೆ. ನ್ಯಾಯ ಎಲ್ಲರಿಗೂ ಒಂದೇ ಇರಬೇಕು. ಕಾಂಗ್ರೆಸ್ಸಿನವರು ಅಧಿಕಾರದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಕೇಸ್ ಮಾಡದಿರುವುದು, ನಾವು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಹದ್ದುಬಸ್ತಿನಲ್ಲಿ ಇಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈ ವಿಷಯವನ್ನು ಆಯುಕ್ತರ ಗಮನಕ್ಕೆ ತಂದಿದ್ದು, ಇದನ್ನು ತೀಕ್ಷ್ಣವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ ಎಂದರು. ಇದೇ ರೀತಿ ನಡೆದರೆ ನಾವು ಕೂಡ ಒಂದು ಹೆಜ್ಜೆ ಮುಂದಿಡಬೇಕಾದೀತು ಎಂದು ಎಚ್ಚರಿಸಿದರು.

ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ 3 ರಾಜ್ಯದಲ್ಲಿ ಅಧಿಕಾರದಲ್ಲಿದೆ; ನಾವು ದೇಶದ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೊಳೆ ಹೊಡೆದಂತೆ ಶಾಶ್ವತವಾಗಿ ಇರುತ್ತದೆ ಎಂಬ ಭ್ರಮೆಯಲ್ಲಿದ್ದರೆ ಅದು ತಪ್ಪು. ಎಷ್ಟೇ ಕೇಸ್ ಹಾಕಿದರೂ ನಾವು ಅವನ್ನು ಎದುರಿಸಿಯೇ ಬಂದವರು ಎಂಬುದನ್ನು ಕಾಂಗ್ರೆಸ್ ನಾಯಕರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ಸಿಮೆಂಟ್ ಮಂಜು, ಕೇಶವ್ ಪ್ರಸಾದ್, ಮಾಜಿ ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಶಾಸಕರಾದ ವೈ. ಸಂಪಂಗಿ, ವೈ.ರಾಮಕ್ಕ, ಎಸ್.ಬಾಲರಾಜು, ಮುಖಂಡರಾದ ತಮ್ಮೇಶ್ ಗೌಡ, ಎಸ್. ಹರೀಶ್, ಸಪ್ತಗಿರಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

Read more Articles on