ಯಲಹಂಕದಲ್ಲಿ ಡಬಲ್‌ ಮರ್ಡರ್‌: ನೇಪಾಳ ಮೂಲದ ಸೆಕ್ಯುರಿಟಿ, ಬಿಹಾರ ಮೂಲದ ಚಾಲಕನ ಕೊಲೆ

| Published : Dec 10 2024, 01:17 AM IST / Updated: Dec 10 2024, 05:35 AM IST

Crime News

ಸಾರಾಂಶ

ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದು ಪರಾರಿ ಆಗಿರುವ ಘಟನೆ ಯಲಹಂಕ ಉಪ ನಗರ ಸಮೀಪ ನಡೆದಿದೆ.

  ಬೆಂಗಳೂರು : ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದು ಪರಾರಿ ಆಗಿರುವ ಘಟನೆ ಯಲಹಂಕ ಉಪ ನಗರ ಸಮೀಪ ನಡೆದಿದೆ.

ಯಲಹಂಕ ಉಪನಗರದ 4ನೇ ಹಂತದ ಖಾಸಗಿ ಕಂಪನಿ ಸೆಕ್ಯುರಿಟಿ ಗಾರ್ಡ್‌ ಬಿಕ್ರಂ ಬಿಸ್ವಕರ್ಮ (21) ಹಾಗೂ ವಾಹನ ಚಾಲಕ ಚೋಟು ತೂರಿ (34) ಕೊಲೆಯಾದ ದುರ್ದೈವಿಗಳು. ಈ ಹತ್ಯೆ ಎಸಗಿ ಪರಾರಿ ಆಗಿರುವ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಯಲಹಂಕ ಉಪನಗರದ 4ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಲವು ದಿನಗಳಿಂದ ಕೈಗಾರಿಕಾ ಪ್ರದೇಶದ ಖಾಸಗಿ ಕೈಗಾರಿಕೆಯ ಕಾವಲುಗಾರನಾಗಿದ್ದ ನೇಪಾಳ ಮೂಲದ ಬ್ರಿಕಂ, ಕೈಗಾರಿಕೆಯ ಆವರಣದಲ್ಲೇ ವಾಸವಾಗಿದ್ದ. ಅದೇ ರೀತಿ ವೆಂಕಟೇಶ್ವರ ಟೆಕ್ಸ್‌ಟೈಲ್ಸ್‌ನಲ್ಲಿ ಬಿಹಾರ ರಾಜ್ಯದ ಚೋಟು ತೂರಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದಿನಗಳಿಂದ ಈ ಇಬ್ಬರು ಸ್ನೇಹಿತರಾಗಿದ್ದು, ಭಾನುವಾರ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಆ ವೇಳೆ ಕುಡಿದ ಮತ್ತಿನಲ್ಲಿ ಅಪರಿಚಿತರ ಜತೆ ತೂರಿ ಹಾಗೂ ಬಿಕ್ರಂ ಜಗಳವಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ದುಷ್ಕರ್ಮಿಗಳು, ತೂರಿ ಹಾಗೂ ಬಿಕ್ರಂ ಮೇಲೆ ಸಿಮೆಂಟ್ ಇಟ್ಟಿಗೆ ಹಾಗೂ ಟೈಲ್ಸ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರೆ. ಈ ಘಟನೆಯಲ್ಲಿ ತೀವ್ರವಾಗಿ ಹಲ್ಲೆಯಿಂದ ರಕ್ತಸ್ರಾವವಾಗಿ ಇಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಘಟನೆ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.