ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಕಿಸ್‌ ಕೊಟ್ಟ ಕ್ಯಾಬ್‌ ಚಾಲಕ!

| Published : Aug 06 2024, 01:30 AM IST / Updated: Aug 06 2024, 05:52 AM IST

Kiss Day

ಸಾರಾಂಶ

ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್‌ ಚಾಲಕನೊಬ್ಬನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ವಾಯು ವಿಹಾರದಲ್ಲಿ ತೊಡಗಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕ್ಯಾಬ್‌ ಚಾಲಕನೊಬ್ಬನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊತ್ತನೂರು ದಿಣ್ಣೆ ನಿವಾಸಿ ಸುರೇಶ್‌ (25) ಬಂಧಿತ. ಆ.2ರಂದು ಮುಂಜಾನೆ ಸುಮಾರು 5.15ಕ್ಕೆ ಕೃಷ್ಣಾನಂದನಗರದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನಕಪುರ ತಾಲೂಕು ಸಂತೆಕೋಡಿಹಳ್ಳಿ ಗ್ರಾಮದ ಆರೋಪಿ ಸುರೇಶ್‌ ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿದ್ದಾನೆ. ಕೋಣನಕುಂಟೆ ಭಾಗದಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳನ್ನು ಮನೆಯಿಂದ ಕರೆದುಕೊಂಡು ಬಂದು ಮತ್ತೆ ವಾಪಸ್‌ ಬಿಡುವ ಕೆಲಸ ಮಾಡುತ್ತಾನೆ.

ಹಿಂದಿನಿಂದ ತಬ್ಬಿ ಚುಂಬಿಸಲು ಯತ್ನ:

ಆ.2ರಂದು ಮುಂಜಾನೆ ಮಹಿಳೆ ಕೃಷ್ಣಾನಂದ ನಗರದಲ್ಲಿ ವಾಯು ವಿಹಾರದಲ್ಲಿ ತೊಡಗಿದ್ದ ವೇಳೆ ಆರೋಪಿ ಸುರೇಶ್‌, ಹಿಂದಿನಿಂದ ಓಡಿ ಬಂದು ಆಕೆಯನ್ನು ತಬ್ಬಿಕೊಂಡು ಚುಂಬಿಸಲು ಮುಂದಾಗಿದ್ದ. ಈ ವೇಳೆ ಮಹಿಳೆ ತೀವ್ರ ಪ್ರತಿರೋಧವೊಡ್ಡಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದರು. ಆದರೂ ಬೆನ್ನಟ್ಟಿದ ಆರೋಪಿಯು ಮತ್ತೆ ಆ ಮಹಿಳೆಯನ್ನು ಹಿಡಿದುಕೊಂಡು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಮಹಿಳೆ ಆತನದಿಂದ ಬಿಡಿಸಿಕೊಂಡು ಮನೆಗೆ ಓಡಿ ಹೋಗಿದ್ದರು. ಈ ದೃಶ್ಯ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸೆರೆ

ಘಟನೆಯಿಂದ ಶಾಕ್‌ಗೆ ಒಳಗಾಗಿದ್ದ ಮಹಿಳೆ ಆರಂಭದಲ್ಲಿ ದೂರು ನೀಡಿರಲಿಲ್ಲ. ಸುಧಾರಿಸಿಕೊಂಡು ಆ.4ರಂದು ಸಂಜೆ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ತವ್ಯ ಲೋಪ: ಎಎಸ್‌ಐ ಸೇರಿ ಮೂವರ ಅಮಾನತು

ಕ್ಯಾಬ್‌ ಚಾಲಕ ಮಹಿಳೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಆದರೆ, ಘಟನೆಯ ಗಂಭೀರತೆ ಅರಿತು ಕೊಳ್ಳದೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಎಎಸ್‌ಐ ಸೇರಿ ಮೂವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿ ನಗರದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಬಿ.ಜಗಲಾಸರ್‌ ಆದೇಶಿಸಿದ್ದಾರೆ.