ಡ್ರಗ್‌ ಮಾಫಿಯಾ: ಖಾಸಗಿ ಆಸ್ಪತ್ರೆ ವೈದ್ಯ, ಮೂವರು ವಿದೇಶಿ ಪ್ರಜೆಗಳ ಸೆರೆ

| Published : Feb 28 2024, 02:34 AM IST / Updated: Feb 28 2024, 09:36 AM IST

DRUGS
ಡ್ರಗ್‌ ಮಾಫಿಯಾ: ಖಾಸಗಿ ಆಸ್ಪತ್ರೆ ವೈದ್ಯ, ಮೂವರು ವಿದೇಶಿ ಪ್ರಜೆಗಳ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯ ಡ್ರಗ್ಸ್ ಮಾಫಿಯ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನೇತ್ರ ವೈದ್ಯ ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿ 2.35 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ಡ್ರಗ್ಸ್ ಮಾಫಿಯ ವಿರುದ್ಧ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನೇತ್ರ ವೈದ್ಯ ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿ 2.35 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.

ನೈಜೀರಿಯಾ ದೇಶದ ಕಾಲು ಚುಕ್ವಾ, ಚೈನಾಸ ಸೈಪ್ರಿಲಾನ್‌ ಒಕೊಯಿ, ಗಾನದ ಇಮ್ಮಾನ್ಯುಲ್‌ ಕ್ವಾಸಿ ಹಾಗೂ ಆರ್‌ಎಂಎಸಿ ಯಾರ್ಡ್‌ ಸಮೀಪದ ನಿವಾಸಿ ಡಾ.ನಿಖಿಲ್ ಬಂಧಿತರಾಗಿದ್ದು, ಆರೋಪಿಗಳಿಂದ 730 ಗ್ರಾಂ ಎಡಿಎಂಎ ಕ್ರಿಸ್ಟೆಲ್‌, 1273 ಎಕ್ಸೈಟೆಸಿ ಮಾತ್ರೆಗಳು, 42 ಗ್ರಾಂ ಹೈಡ್ರೋ ಗಾಂಜಾ ಹಾಗೂ ನಾಲ್ಕು ಮೊಬೈಲ್‌ಗಳು ಸೇರಿದಂತೆ 2.35 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸೋಲದೇವನಹಳ್ಳಿ ಹಾಗೂ ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಪ್ರವಾಸಿಗರಾಗಿ ಬಂದು ಡ್ರಗ್ಸ್ ದಂಧೆ: ಕೆಲ ತಿಂಗಳ ಹಿಂದೆ ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿದ್ದ ನೈಜೀರಿಯಾದ ಚುಕ್ವಾ ಹಾಗೂ ಒಕೊಯಿ ಹಣದಾಸೆಗೆ ಡ್ರಗ್ಸ್‌ ದಂಧೆಗಿಳಿದಿದ್ದರು. ಅಂತಾರಾಷ್ಟ್ರೀಯ ಡ್ರಗ್ಸ್ ಮಾರಾಟ ಸಂಪರ್ಕ ಜಾಲದ ಮೂಲಕ ಡ್ರಗ್ಸ್ ಖರೀದಿಸಿ ಭಾರತದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. 

ಈ ಪೆಡ್ಲರ್‌ಗಳ ಪೈಕಿ ಒಕೊಯಿನನ್ನು ಡ್ರಗ್ಸ್ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಬಳಿ ನೆಲೆಸಿದ್ದ ಆತ, ತನ್ನ ದೇಶದ ಚುಕ್ವಾ ಜತೆ ಸೇರಿಕೊಂಡು ಡ್ರಗ್ಸ್ ದಂಧೆಯನ್ನು ಮುಂದುವರೆಸಿದ್ದ. 

ಈ ಇಬ್ಬರ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ಮಹಮ್ಮದ್ ಮುಕ್ರಂ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿತು. ಆರೋಪಿಗಳಿಂದ 51 ಲಕ್ಷ ರು. ಮೌಲ್ಯದ 500 ಗ್ರಾಂ ಎಡಿಎಂಎ ಕ್ರಿಸ್ಟೆಲ್‌ ಹಾಗೂ 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮತ್ತೊಂದು ಪ್ರಕರಣ: ಸೋಲದೇವನಹಳ್ಳಿ ಬಳಿ ಮತ್ತೊಬ್ಬ ಘಾನ ದೇಶದ ಪೆಡ್ಲರ್‌ ಇಮ್ಯಾನ್ಯುಲ್‌ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಎರಡು ವರ್ಷಗಳ ಹಿಂದೆ ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆತ, ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ಮಾರಾಟ ಶುರು ಮಾಡಿದ್ದ. 

ಸ್ಥಳೀಯ ಹಾಗೂ ವಿದೇಶಿ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ದುಬಾರಿ ಬೆಲೆಗೆ ಮಾರುತ್ತಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಿ 236 ಎಂಡಿಎಂಎ ಕ್ರಿಸ್ಟೆಲ್‌, 1273 ಎಕ್ಸೈಟೆಸಿ ಮಾತ್ರೆಗಳು ಸೇರಿದಂತೆ 1.81 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ತಂಡ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಿಂದ ಡ್ರಗ್ಸ್ ತರಿಸಿದ್ದ ನೇತ್ರ ವೈದ್ಯ
ನೆದರ್‌ಲ್ಯಾಂಡ್ ದೇಶದಿಂದ ಹೈಡ್ರೋ ಗಾಂಜಾವನ್ನು ಕೊರಿಯರ್ ಮೂಲಕ ತರಿಸಿಕೊಂಡು ಪಾರ್ಟಿಗಳಿಗೆ ಬಳಸುತ್ತಿದ್ದ ನಗರದ ಪ್ರತಿಷ್ಠಿತ ಆಸ್ಪತ್ರೆಯ ನೇತ್ರ ವೈದ್ಯ ಡಾ.ನಿಖಿಲ್‌ನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಡ್ರಗ್ಸ್ ಸಾಗಾಣಿಕೆ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ ವಿದೇಶದಿಂದ ಬರುವ ಕೊರಿಯರ್‌ಗಳ ಮೇಲೆ ಸಿಸಿಬಿ ಕಣ್ಣೀಟ್ಟಿದ್ದರು. ಆಗ ಖಾಸಗಿ ಆಸ್ಪತ್ರೆ ವೈದ್ಯನೊಬ್ಬನಿಗೆ ನೆದರ್ಲ್ಯಾಂಡ್‌ನಿಂದ ಕೊರಿಯರ್‌ನಲ್ಲಿ ಹೈಡ್ರೋ ಗಾಂಜಾ ಬಂದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. 

ತಕ್ಷಣವೇ ಪೊಲೀಸರು ಆರ್‌ಎಂಎಸಿ ಯಾರ್ಡ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಡಾ.ನಿಖಿಲ್‌ನನ್ನು ಬಂಧಿಸಿತು. ಆತನ ಮನೆಯಲ್ಲಿ ತಪಾಸಣೆ ನಡೆಸಿದಾಗ 3 ಲಕ್ಷ ರು. ಮೌಲ್ಯದ 42 ಗ್ರಾಂ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಮೂರು ವರ್ಷಗಳಿಂದ ಆತ ವಿದೇಶದಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ಸಂಗತಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.