ವಿದೇಶದಲ್ಲಿ ಕುಳಿತು ನಗರದಲ್ಲಿ ಡ್ರಗ್ಸ್‌ ದಂಧೆ: ಮೂವರ ವಿರುದ್ಧ ಕೇಸ್‌

| Published : Jul 07 2024, 01:15 AM IST / Updated: Jul 07 2024, 05:11 AM IST

ವಿದೇಶದಲ್ಲಿ ಕುಳಿತು ನಗರದಲ್ಲಿ ಡ್ರಗ್ಸ್‌ ದಂಧೆ: ಮೂವರ ವಿರುದ್ಧ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶದಲ್ಲಿ ನೆಲೆಸಿ ನಗರದಲ್ಲಿ ಸ್ಥಳೀಯರನ್ನು ಬಳಸಿಕೊಂಡು ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿರುವ ಆರೋಪದಡಿ ತಾಯಿ, ಮಗಳು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬೆಂಗಳೂರು :  ವಿದೇಶದಲ್ಲಿ ನೆಲೆಸಿ ನಗರದಲ್ಲಿ ಸ್ಥಳೀಯರನ್ನು ಬಳಸಿಕೊಂಡು ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿರುವ ಆರೋಪದಡಿ ತಾಯಿ, ಮಗಳು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಕ್ಕೂರಿನ ಎಂಬೆಸ್ಸಿ ಬುಲೆವಾರ್ಡ್‌ ನಿವಾಸಿ ಆಯಾಜ್‌ ಮೆಹಮೂದ್‌ ಎಂಬುವವರು ನೀಡಿದ ದೂರಿನ ಮೇರೆಗೆ ದುಬೈ ನಿವಾಸಿಗಳಾದ ನತಾಲಿಯಾ ನಿರ್ವಾನಿ, ಅವರ ತಾಯಿ ಲೀನಾ ನಿರ್ವಾನಿ ಹಾಗೂ ರಂಜನ್‌ ಎಂಬುವವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಆಯಾಜ್‌ ಮೆಹಮೂದ್‌ ನೀಡಿದ ದೂರಿನಲ್ಲಿ ‘ ನತಾಲಿಯಾ ನಿರ್ವಾನಿ ಅವರು ತಮ್ಮ ತಾಯಿ ಲೀನಾ ನಿರ್ವಾನಿ ಜತೆಗೆ ದುಬೈನಲ್ಲಿ ನೆಲೆಸಿದ್ದಾರೆ. ನತಾಲಿಯಾ ನಗರದ ಸ್ಥಳೀಯ ರಂಜನ್‌ ಎಂಬಾತನ ಮುಖಾಂತರ ಸ್ಥಳೀಯರಿಂದ ಹಣ ಪಡೆದು ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಸೇರಿದಂತೆ ಇತರೆ ಮಾದಕಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅಂತೆಯೇ ತಮ್ಮ ಮಗ ಆಯಾನ್‌ ಮೆಹಮೂದ್‌ಗೂ ಸಹ ಮಾದಕವಸ್ತು ಸರಬರಾಜು ಮಾಡಿ ಒತ್ತಾಯ ಪೂರ್ವಕವಾಗಿ ಸೇವಿಸುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ನತಾಲಿಯಾ ಖಾಸಗಿ ಬ್ಯಾಂಕ್‌ ಖಾತೆ ಹೊಂದಿದ್ದು, ಈ ಖಾತೆಗೆ ಯುವಕರಿಂದ ಹಣ ಹಾಕಿಸಿಕೊಂಡು ರಂಜನ್‌ ಹಾಗೂ ಇತರರ ಮೂಲಕ ಅವರಿಗೆ ಮಾದಕಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ನತಾಲಿಯಾ ದುಬೈ-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳಿಗೆ ಶೀಘ್ರದಲ್ಲೇ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮಾಡುವುದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.