₹25 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

| Published : Dec 18 2024, 01:47 AM IST

ಸಾರಾಂಶ

ಹೊಸ ವರ್ಷಾಚರಣೆ ದಿನಗಣನೆ ಶುರುವಾದ ಬೆನ್ನಲ್ಲೇ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ನಗರದಲ್ಲಿ ಮತ್ತೆ ವಿದೇಶಿ ಮಹಿಳೆ ಸೇರಿ 12 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಸಂಗ್ರಹಿಸಿದ್ದ ₹25 ಕೋಟಿ ಮೌಲ್ಯದ ಮಾದಕ ವಸ್ತು ವನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ದಿನಗಣನೆ ಶುರುವಾದ ಬೆನ್ನಲ್ಲೇ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ನಗರದಲ್ಲಿ ಮತ್ತೆ ವಿದೇಶಿ ಮಹಿಳೆ ಸೇರಿ 12 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಸಂಗ್ರಹಿಸಿದ್ದ ₹25 ಕೋಟಿ ಮೌಲ್ಯದ ಮಾದಕ ವಸ್ತು ವನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್‌.ಪುರದ ರೋಸೆಲಿಮೆ, ಚಿಕ್ಕಬಳ್ಳಾಪುರ ಜಿಲ್ಲೆಯ ಖದೀರ್ ಪಾಷ, ಮಹಮ್ಮದ್ ಅಲಿ, ಅಜಯ್‌, ಹರೀಶ್‌, ವೀರೇಶ ನಗರದ ಶ್ರೀಕಾಂತ್‌, ನೃಪತುಂಗ ರೆಸಿಡೆನ್ಸಿಯಲ್‌ ಲೇಔಟ್‌ನ ಮುನಿರಾಜು, ಬೇಗೂರಿನ ಚಾಮುಂಡೇಶ್ವರಿ ನಗರದ ಚಂದ್ರಕಾಂತ್‌, ಆನೇಕಲ್ ತಾಲೂಕಿನ ಜಿಗಣಿ ವಿ.ಬಾಲಕೃಷ್ಣ, ಪಶ್ಚಿಮ ಬಂಗಾಳದ ಹಲ್ಮಿಮ್ ಮಂಡಲ್‌ ಹಾಗೂ ಸನರುಲ್‌ ಶೇಕ್‌ ಬಂಧಿತರಾಗಿದ್ದಾರೆ. ಆರೋಪಿಗಳಿಂದ ₹ 25 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಸಿಸಿಬಿ, ಯಲಹಂಕ, ಅಮೃತಹಳ್ಳಿ, ಅಶೋಕನಗರ ಹಾಗೂ ಕೊಡಿಗೇಹಳ್ಳಿ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ಒಣ ಮೀನು, ದಿನಸಿಯಲ್ಲಿ ಮಾರುತ್ತಿದ್ದ ₹24 ಕೋಟಿ ಡ್ರಗ್ಸ್ ಜಪ್ತಿ

ಕೆ.ಆರ್.ಪುರ ಸಮೀಪದ ‘ನೈಜಿರಿಯನ್‌ ಕಿಚನ್‌’ ಹೆಸರಿನ ಅಂಗಡಿ ತೆರೆದು ದಿನಸಿ ಪದಾರ್ಥಗಳಲ್ಲಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆ ಬಂಧಿಸಿ 24 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ನೈಜೀರಿಯಾ ದೇಶದ ರೋಸೆಲಿಮೆ ಬಂಧಿತಳಾಗಿದ್ದು, ಆರೋಪಿಯಿಂದ 5.5 ಕೆಜಿ ಹಳದಿ ಬಣ್ಣದ ಎಂಡಿಎಂಎ ಸೇರಿ 24 ಕೋಟಿ ಬೆಲೆಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬಳು ಜ್ಯುಲೈಟ್‌ ಪತ್ತೆಗೆ ತನಿಖೆ ನಡೆದಿದೆ. 5 ವರ್ಷಗಳ ಹಿಂದೆ ನಗರಕ್ಕೆ ಹಂದು ಕೆ.ಆರ್‌.ಪುರದ ಸಮೀಪದ ಟಿಸಿ ಪಾಳ್ಯದಲ್ಲಿ ಆಕೆ ನೆಲೆಸಿದ್ದಳು. ಬಳಿಕ ಮದರ್ ಥೆರೇಸಾ ಶಾಲೆ ರಸ್ತೆ ವಾರಣಾಸಿ ಬಳಿ ನೈಜಿರಿಯನ್‌ ಕಿಚನ್‌ ಹೆಸರಿನ ದಿನಸಿ ಅಂಗಡಿಯನ್ನು ಆರೋಪಿ ತೆರೆದಿದ್ದಳು. ಈ ಅಂಗಡಿಯಲ್ಲಿ ದಿನಸಿ ಮಾರಾಟ ಸೋಗಿನಲ್ಲಿ ಆಕೆ ಡ್ರಗ್ಸ್ ದಂಧೆ ನಡೆಸುತ್ತಿದ್ದಳು.

ಮುಂಬೈ ನಗರದಲ್ಲಿರುವ ಆಫ್ರಿಕಾ ಮೂಲದ ಮಹಿಳಾ ಪೆಡ್ಲರ್ ಬಳಿ ಡ್ರಗ್ಸ್ ಖರೀದಿಸಿ ನಗರಕ್ಕೆ ತರುತ್ತಿದ್ದ ಈಕೆ, ತರುವಾಯ ಒಣ ಮೀನು, ಅಕ್ಕಿ, ಹೆಸರುಬೇಳೆ ಹಾಗೂ ಸೋಪು ಸೇರಿ ಇತರೆ ವಸ್ತುಗಳಲ್ಲಿ ಡ್ರಗ್ಸ್ ಅಡಗಿಸಿ ಗ್ರಾಹಕರಿಗೆ ಮಾರುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ಭರತ್ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಆಂಧ್ರದಿಂದ ನಗರಕ್ಕೆ ಗಾಂಜಾ ಆಮದು:

ಹೊಸ ವರ್ಷದ ಪಾರ್ಟಿ ಮತ್ತೇರಿಸಲು ನೆರೆ ರಾಜ್ಯದಿಂದ ಸಿನಿಮೀಯ ಶೈಲಿಯಲ್ಲಿ ಗಾಂಜಾ ಪೂರೈಸುತ್ತಿದ್ದ ನಾಲ್ವರು ಯಲಹಂಕ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಖದೀರ್ ಪಾಷ, ಮಹಮ್ಮದ್ ಅಲಿ, ಅಜಯ್‌, ಹರೀಶ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹74.53 ಲಕ್ಷ ಮೌಲ್ಯದ 93 ಕೆಜಿ ಗಾಂಜಾ, ಟ್ರಕ್ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬಳಿಕ ಸರಕು ಸಾಗಾಣಿಕೆ ವಾಹನದಲ್ಲಿ ತುಂಬಿಕೊಂಡು ನಗರಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು.

ಈ ನಾಲ್ವರ ಪೈಕಿ ಆರೋಪಿಗಳ ಪೈಕಿ ಖಾದೀರ್ ಪಾಷ ಅಪರಾಧ ಹಿನ್ನಲೆ ಉಳ್ಳವನಾಗಿದ್ದು, ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದ. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ತನ್ನ ಮೂವರು ಸ್ನೇಹಿತರ ಜತೆ ಸೇರಿ ಗಾಂಜಾ ದಂಧೆಗಿಳಿದಿದ್ದ.

ಪರಪ್ಪನ ಅಗ್ರಹಾರ ಜೈಲಿನಿಂದಲೇ ಡ್ರಗ್ಸ್ ಡೀಲ್ :

ಅಶೋಕನಗರ ಠಾಣೆ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಕುಳಿತೇ ಡ್ರಗ್ಸ್ ಡೀಲ್ ನಡೆಸುತ್ತಿದ್ದ ಸಜಾ ಕೈದಿ ಹಾಗೂ ಆತನ ಸಹಚರರು ಸಿಕ್ಕಿಬಿದ್ದಿದ್ದಾರೆ. ವೀರೇಶ ನಗರದ ಶ್ರೀಕಾಂತ್‌, ನೃಪತುಂಗ ರೆಸಿಡೆನ್ಸಿಯಲ್‌ ಲೇಔಟ್‌ನ ಮುನಿರಾಜು, ಬೇಗೂರಿನ ಚಾಮುಂಡೇಶ್ವರಿ ನಗರದ ಚಂದ್ರಕಾಂತ್‌, ಆನೇಕಲ್ ತಾಲೂಕಿನ ಜಿಗಣಿ ವಿ.ಬಾಲಕೃಷ್ಣ ಬಂಧಿತರಾಗಿದ್ದು, ಆರೋಪಿಗಳಿಂದ ₹30.68 ಲಕ್ಷ ಮೌಲ್ಯದ 76.100 ಕೆಜಿ ಗಾಂಜಾ ಜಪ್ತಿಯಾಗಿದೆ. ಈ ತಂಡ ಕೂಡ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಹೊಸ ವರ್ಷಾಚರಣೆ ವೇಳೆ ದುಬಾರಿ ಮಾರಾಟಕ್ಕೆ ಸಜ್ಜಾಗಿತ್ತು. ಇನ್ನು ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಜಿಗಣಿ ಬಾಲು, ತನ್ನ ಸಹಚರರ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ.

ಇನ್ನು ಅದೇ ರೀತಿ ನಗರದಲ್ಲಿ ಗಾಂಜಾ ಮಾರಾಟಕ್ಕಿಳಿದಿದ್ದ ಮೂವರು ಪೆಡ್ಲರ್‌ಗಳನ್ನು ಬಾಣಸವಾಡಿ ಪೊಲೀಸರು ಹಾಗೂ ಒಬ್ಬನನ್ನು ಅಮೃತಹಳ್ಳಿ ಪೊಲೀಸರು ಪ್ರತ್ಯೇಕವಾಗಿ ಸೆರೆ ಹಿಡಿದಿದ್ದಾರೆ. ಆರೋಪಿಗಳಿಂದ 16.5 ಲಕ್ಷ ರು ಗಾಂಜಾ ಜಪ್ತಿಯಾಗಿದೆ. ಈ ಪೆಡ್ಲರ್‌ಗಳು ಕೂಡ ಹೊರ ರಾಜ್ಯದಿಂದ ಗಾಂಜಾವನ್ನು ನಗರಕ್ಕೆ ಪೂರೈಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.