ಬೆಂಗಳೂರು : ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ- 64 ಪ್ರಕರಣ

| Published : Sep 21 2024, 01:49 AM IST / Updated: Sep 21 2024, 04:52 AM IST

ಸಾರಾಂಶ

ಬೆಂಗಳೂರಿನಲ್ಲಿ ಪಾನಮತ್ತ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ದಕ್ಷಿಣ ವಿಭಾಗದ ಪೊಲೀಸರು 64 ಪಾನಮತ್ತ ಚಾಲನೆ ಪ್ರಕರಣಗಳು ಮತ್ತು 65 ಶಾಲಾ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

  ಬೆಂಗಳೂರು : ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಗುರುವಾರ ರಾತ್ರಿ ಪಾನಮತ್ತ ಚಾಲಕರು/ಸವಾರರ ವಿರುದ್ಧ 64 ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಂಚಾರ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ರಾತ್ರಿ 6,190 ವಾಹನಗಳ ಸಪಾಸಣೆ ಕೈಗೊಂಡು ಮದ್ಯ ಸೇವಿಸಿ ವಾಹನಗಳ ಚಾಲನೆ ಮಾಡುತ್ತಿದ್ದ ಚಾಲಕರರು/ ಸವಾರರ ವಿರುದ್ಧ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ 64 ಪ್ರಕರಣ ದಾಖಲಿಸಿದ್ದಾರೆ.

ಸಂಚಾರ ಪೊಲೀಸರು ವಾಹನಗಳ ತಪಾಸಣೆ ಜತೆಗೆ ಸಾರ್ವಜನಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಚಾಲಕರು/ಸವಾರರಿಗೆ ಸೂಚಿಸಿದ್ದಾರೆ. ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದ್ದಾರೆ.

ಶಾಲಾ ವಾಹನ ವಿರುದ್ಧ 65 ಪ್ರಕರಣ ದಾಖಲು

ನಗರ ಸಂಚಾರ ದಕ್ಷಿಣ ವಿಭಾಗದ ಪೊಲೀಸರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ವಾಹನಗಳ ವಿರುದ್ಧ ಶುಕ್ರವಾರ ಬೆಳಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಂಡು 814 ಶಾಲಾ ವಾಹನಗಳ ತಪಾಸಣೆ ನಡೆಸಿ 65 ಪ್ರಕರಣ ದಾಖಲಿಸಿದ್ದಾರೆ. ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸುತ್ತಿದ್ದ ಐವರು ಚಾಲಕರು ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘಿಸಿದ 49 ಶಾಲಾ ವಾಹನಗಳ ಚಾಲಕರು ಸೇರಿದಂತೆ ಒಟ್ಟು 65 ಪ್ರಕರಣಗಳನ್ನು ದಾಖಲಿಸಿದ್ದಾರೆ.